ವರದಿ : ಶಫೀ ಉಚ್ಚಿಲ
ಕಾಪು: ಪ್ರವಾದಿ ಮುಹಮ್ಮದರು ಸಾರಿದ ಮಾನವ ಧರ್ಮವೇ ಶ್ರೇಷ್ಠ ಧರ್ಮ. ಧರ್ಮ ಹುಟ್ಟಿಸಿದ ನಾವೇ ಸ್ವಾರ್ಥ ಹಾಗೂ ಆಸ್ಮಿತೆಗೋಸ್ಕರ ಅದನ್ನಿಂದು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ.
ಸ್ತ್ರೀಯರ ಮೇಲಿನ ಶೋಷಣೆ ನಿಂತಾಗ ಧರ್ಮಗಳು ಶ್ರೇಷ್ಠವಾಗುತ್ತದೆ. ಧರ್ಮ ಶುದ್ಧಿಯಾಗಲು ಸಮಾನ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಅಭಿಪ್ರಾಯ ಪಟ್ಟರು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಸಮಿತಿ ಶನಿವಾರ ಕಾಪು ಶಾಂಭವಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾನವತೆಯ ಪ್ರತಿಪಾದಕ ಪ್ರವಾದಿ ಮಹಮ್ಮದರ ಜೀವನ ಮತ್ತು ಸಂದೇಶ ಸಭೆಯಲ್ಲಿ ಮಾತನಾಡಿದರು.
ಬಳಿಕ ಮಂಗಳೂರು ಶಾಂತಿಪ್ರಕಾಶನ ವ್ಯವಸ್ಥಾಪಕ ಮಹಮ್ಮದ್ ಕುಂಞ ಮಾತನಾಡಿ ದಾರ್ಶನಿಕರು, ಮಹಾಪುರುಷರು, ಧಾರ್ಮಿಕ ಆಚಾರ್ಯರನ್ನು ಇಂದು ಧರ್ಮ, ಜಾತಿ ಮತ್ತು ವರ್ಗಕ್ಕೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿದೆ.
ಜಗತ್ತಿನ ಅಗ್ರ ರಾಷ್ಟ್ರದಲ್ಲಿಯೂ ಕೇವಲ ಅಧಿಕಾರದ ಆಸೆಗಾಗಿ ಮನುಷ್ಯತ್ವ ಮರೆಯುವ ಪ್ರಯತ್ನಗಳಾಗುತ್ತಿವೆ ಎಂದರು.
ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಇದ್ರೀಸ್ ವಿಷಯ ಮಂಡಿಸಿದರು. ಉಳಿಯಾರಗೋಳಿ ದಂಡತೀರ್ಥ ಪ.ಪೂ. ಕಾಲೇಜು ನಿಕಟಪೂರ್ವ ಪ್ರಾಂಶುಪಾಲ ನೀಲಾನಂದ ನಾಯ್ಕ್ ಮಾತನಾಡಿದರು.
ನಿವೃತ್ತ ಶಿಕ್ಷಕ ನಿರ್ಮಲಕುಮಾರ್ ಹೆಗ್ಡೆ, ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಅನಿಸಿಕೆ ವ್ಯಕ್ತಪಡಿಸಿದರು.
ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೌಲಾ ಉಪಸ್ಥಿತರಿದ್ದರು. ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು ತಾಲೂಕು ಸಮಿತಿ ಅಧ್ಯಕ್ಷ ಶಬೀ ಅಹಮದ್ ಖಾಝಿ ಸ್ವಾಗತಿಸಿದರು.
ಕೊಂಬಗುಡ್ಡೆ ಜಾಮಿಯಾ ಮಸೀದಿ ಧರ್ಮಗುರು ಮಹಮ್ಮದ್ ಪರ್ವರೇಜ್ ಆಲಂ ಕುರಾನ್ ಪಠಿಸಿದರು.
ಮುಸ್ಲಿಂ ಒಕ್ಕೂಟ ಜಿಲ್ಲಾ ಸಮಿತಿ ಸದಸ್ಯ ಅನ್ವರ್ ಆಲಿ ಕಾಪು ನಿರೂಪಿಸಿದರು. ಕಾಪು ತಾಲೂಕು ಸಮಿತಿ ಕೋಶಾಧಿಕಾರಿ ಮಹಮ್ಮದ್ ಇಕ್ಬಾಲ್ ವಂದಿಸಿದರು.
Kshetra Samachara
24/10/2020 05:42 pm