ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚ್ಚಿಲ : ರಾ.ಹೆ. ಪಕ್ಕ ಗೂಡಂಗಡಿ ತೆರವಿಗೆ ಮುಂದಾದ ನವಯುಗ ಕಂಪೆನಿ ಸಿಬ್ಬಂದಿ ಜತೆ ಅಂಗಡಿ ಮಾಲಕರ ಮಾತಿನ ಚಕಮಕಿ

ವರದಿ: ಶಫೀ ಉಚ್ಚಿಲ

ಕಾಪು: ರಾ.ಹೆ.66 ಚತುಷ್ಪಥ ಕಾಮಗಾರಿಗೆ ಉಚ್ಚಿಲದಲ್ಲಿ ಸ್ವಾಧೀನಪಡಿಸಿದ ಜಮೀನಿನಲ್ಲಿ ನಿರ್ಮಿಸಿರುವ ಗೂಡಂಗಡಿಗಳನ್ನು ತೆರವು ಮಾಡಲು ಮುಂದಾದ ಗುತ್ತಿಗೆದಾರ ನವಯುಗ ಕಂಪೆನಿ ಸಿಬ್ಬಂದಿಯೊಂದಿಗೆ ಅಂಗಡಿ ಮಾಲಕರು ಮಾತಿನ ಚಕಮಕಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಉಚ್ಚಿಲಪೇಟೆಯಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣವಾಗಿದ್ದರೂ, ಸರ್ವೀಸ್ ರಸ್ತೆ ನಿರ್ಮಾಣ ಈವರೆಗೂ ನಡೆದಿಲ್ಲ. ಇದೀಗ ಗುತ್ತಿಗೆದಾರರು ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಗೂಡಂಗಡಿಗಳ ತೆರವಿಗೆ ಸೂಚನೆ ನೀಡಿದ್ದಾರೆ.

ಆದರೆ ಸೂಚನೆ ಉಲ್ಲಂಘಿಸಿ ಗೂಡಂಗಡಿ ತೆರವು ಮಾಡದ ಪರಿಣಾಮ ಸಮಸ್ಯೆ ಉದ್ಭವಿಸಿದೆ. ಅಲ್ಲದೆ, ವಾಣಿಜ್ಯ ಸಂಕೀರ್ಣ ಮಳಿಗೆಗಳಿಗೂ ಸಾಕಷ್ಟು ತೊಂದರೆಯುಂಟು ಮಾಡುತ್ತಿದೆ.

ಅದನ್ನು ಮನಗಂಡು ನವಯುಗ ಕಂಪೆನಿ ಪ್ರಬಂಧಕ ಸಹಿತ ಸಿಬ್ಬಂದಿ ಗೂಡಂಗಡಿ ತೆರವಿಗೆ ಮುಂದಾಗಿದ್ದರು. ಈ ವೇಳೆ ಗೂಡಂಗಡಿಯವರು ಒಬ್ಬರು ಇನ್ನೊಬ್ಬರತ್ತ ಬೆರಳು ಮಾಡಿ ತೆರವು ಮಾಡುವಂತೆ ಮಾತಿನ ಚಕಮಕಿ ನಡೆಸಿದರು.

ಕೆಲ ಮಂದಿ ಶಾಸಕರ ಪ್ರಭಾವ ಬಳಸಿ ತೆರವು ಮಾಡದಂತೆ ತಾಕೀತು ಮಾಡಿದರು. ಪರಿಣಾಮ ಸಿಬ್ಬಂದಿ ತೆರವು ಮಾಡಲಾಗದೆ ಬರಿಗೈಯಲ್ಲಿ ವಾಪಸಾದರು.

ಅಪೂರ್ಣ ಸರ್ವೀಸ್ ರಸ್ತೆಯಿಂದ ಹೆಚ್ಚಿದ ಗೂಡಂಗಡಿ ಭೂಸ್ವಾಧೀನಗೊಂಡು ವರ್ಷಗಳೇ ಕಳೆದರೂ ಉಚ್ಚಿಲ ಪೇಟೆಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನೂ ಸರ್ವೀಸ್ ರಸ್ತೆ ನಿರ್ಮಾಣ ಅಪೂರ್ಣವಾಗಿದೆ.

ಪರಿಣಾಮ ಪೇಟೆ ಇಕ್ಕೆಲದ ಬೀದಿ ವ್ಯಾಪಾರಿ ಮಳಿಗೆಗಳು ಕಾರ್ಯಾರಂಭಿಸಿವೆ. ಇದು ಸಾಕಷ್ಟು ಖರ್ಚು ಮಾಡಿ ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯಾಪಾರ ನಡೆಸುವ ಅಂಗಡಿಯವರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಹೆದ್ದಾರಿ ಇಲಾಖೆ ಹಾಗೂ ಗುತ್ತಿಗೆದಾರರಲ್ಲಿ ಎರಡೂ ಕಡೆಯವರು ರಾಜಕೀಯ ಪ್ರಭಾವ ಬಳಸುತ್ತಿರುವುದರಿಂದ ಸಮಸ್ಯೆ ಇನ್ನಷ್ಟು ಕಗ್ಗಂಟಾಗಿದೆ.

ಜನಪ್ರತಿನಿಧಿಗಳು ಹಾಗೂ ಇಲಾಖೆ ಈ ಬಗ್ಗೆ ಎಚ್ಚೆತ್ತು ಸಮಸ್ಯೆ ಶೀಘ್ರ ಪರಿಹರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಉಚ್ಚಿಲದಲ್ಲಿ ಈಗಾಗಲೇ ಸ್ವಾಧೀನವಾಗಿರುವ ಜಮೀನಿನಲ್ಲಿ ತೆರವು ಮಾಡದಿರುವ ಕಟ್ಟಡ ಶೀಘ್ರ ತೆರವು ಮಾಡಬೇಕಿದೆ. ಗೂಡಂಗಡಿ ತೆರವು ಮಾಡಿ ಸರ್ವೀಸ್ ರಸ್ತೆ ಕಾಮಗಾರಿ ನಡೆಸುವಂತೆ ಹಲವು ದೂರು ಬರುತ್ತಿವೆ.

ತೆರವು ಮಾಡಿಕೊಡುವಂತೆ ಉಪವಿಭಾಗಾಧಿಕಾರಿ ಹಾಗೂ ಪೊಲೀಸರಿಗೆ ದೂರು ನೀಡಲಾಗುವುದು ಎಂದು ನವಯುಗ ಕಂಪೆನಿ ಪ್ರಬಂಧಕ ಶಿವಪ್ರಸಾದ್ ರೈ ತಿಳಿಸಿದರು.

Edited By : Nirmala Aralikatti
Kshetra Samachara

Kshetra Samachara

09/10/2020 07:55 pm

Cinque Terre

15.04 K

Cinque Terre

1

ಸಂಬಂಧಿತ ಸುದ್ದಿ