ಮಣಿಪಾಲ ಸಮೀಪದ ಪರ್ಕಳ ದೇವಿ ನಗರದ ಹಲವೆಡೆ ಮಳೆ ಬಂದಾಗ ಕಾಣಿಸಿಕೊಳ್ಳುವ ಬಸವನ ಹುಳು ಬಾದೆ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಪರ್ಕಳ ಸಮೀಪದ ಬಿಎಂ ಸ್ಕೂಲ್ನ ಗೋಡೆಗಳು, ಅಂಗನವಾಡಿಯ ಗೋಡೆಗಳ ಮೇಲೆ ಹಾಗೂ ಪರ್ಕಳ ದೇವಿ ನಗರದ ಮನೆಗಳ ಕಂಪೌಂಡ್ ಸುತ್ತಲೂ ಆಫ್ರಿಕನ್ ಮಾದರಿಯ ಬಸನ ಹುಳು ಬಾದೆ ಕಂಡು ಬಂದಿದೆ.
ಸ್ಥಳೀಯ ಅಬ್ದುಲ್ ಸತ್ತಾರ್ ಅವರು ಹೇಳುವ ಪ್ರಕಾರ, ಕಳೆದ ವರ್ಷ ಕೂಡ ಇದೇ ರೀತಿ ಬಸವನ ಹುಳು ಕಾಣಿಸಿಕೊಂಡಾಗ 9 ಗೋಣಿ ಕಲ್ಲು ಉಪ್ಪು ಬಳಸಿದ್ದೇವೆ. ಆದರೂ ಕೂಡ ಈ ಹುಳದ ಉಪಟಳ ಕೊನೆಗೊಂಡಿಲ್ಲ. ಈ ವರ್ಷ ಮಳೆ ಆರಂಭವಾದಾಗ ತಮ್ಮ ಮನೆಯ ಗೋಡೆಯಲ್ಲಿ ಈ ಹುಳ
ಕಂಡುಬಂದಿದ್ದು ಮನೆಯ ಗಿಡಗಂಟೆಗಳನ್ನು ತಿನ್ನಲು ಶುರು ಮಾಡಿವೆ. ಈ ಪರಿಸರದಲ್ಲಿ ಬಸವನ ಹುಳುವಿನಿಂದ ತೊಂದರೆಯಾಗುತ್ತಿದ್ದು ಕಳೆದ ವರ್ಷ ನಗರಸಭೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಬಾರಿ ಕೂಡ ಸಾರ್ವಜನಿಕರಿಗೆ ಸಮಸ್ಯೆಯಾಗಿದೆಯಂತೆ.
ಈ ಹುಳವು ಸುರಿಸುವ ಎಂಜಲು ಬಲು ವಾಸನೆಯಿಂದ ಕೂಡಿದ್ದು, ಪರಿಸರದಲ್ಲಿ ವಿಪರೀತ ದುರ್ವಾಸನೆ ಹರಡುತ್ತಿದೆ. ರಾತ್ರಿಯ ಹೊತ್ತು ಈ ಹುಳ ಶಬ್ದ ಮಾಡುತ್ತದೆ. ಮಳೆ ಬಂದಾಗ ಭೂಮಿಯ ಮೇಲೆ ಸಂಚರಿಸುತ್ತದೆ. ಆದ್ದರಿಂದ ನಗರಸಭೆಯ ಆರೋಗ್ಯ ಅಧಿಕಾರಿಗಳು ಈ ಹುಳು ಬಾಧೆಗೆ ಕೀಟನಾಶಕವನ್ನು ಸಿಂಪಡಿಸಿ ಇದಕ್ಕೊಂದು ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಆಗ್ರಹಿಸಿದ್ದಾರೆ.
Kshetra Samachara
13/06/2022 04:43 pm