ಮುಲ್ಕಿ: ಇಲ್ಲಿಗೆ ಸಮೀಪದ ಅಕ್ಕಸಾಲಿಗರ ಕೇರಿಯ ಶ್ರೀ ಪುರಾತನ ಮಾರಿಯಮ್ಮ ದೇವಸ್ಥಾನದಲ್ಲಿ ಶ್ರೀ ದೇವಿಯ ಪುನರ್ ಪ್ರತಿಷ್ಠೆ ಹಾಗೂ ಚಂಡಿಕಾ ಯಾಗ ವೇದಮೂರ್ತಿ ಕಲ್ಲಾಪು ನಾರಾಯಣ ಭಟ್ ನೇತೃತ್ವದಲ್ಲಿ ನಡೆಯಿತು.
ಫೆ. 21ರಂದು ಸಂಜೆ 6 ಗಂಟೆಗೆ ಪುಣ್ಯಾಹ ವಾಚನ, ವಾಸ್ತು ಮಂಡಲ ರಚನೆ, ವಾಸ್ತು ಪೂಜೆ, ವಾಸ್ತು ಹೋಮ, ಚೋರ ಶಾಂತಿ, ವಾಸ್ತು ಬಲಿ ಬಿಂಬ ಶುದ್ಧಿ, ಬಿಂಬ ಅಧಿವಾಸ ನಡೆಯಿತು. ಫೆ. 22ರಂದು ಸೋಮವಾರ ಬೆಳಿಗ್ಗೆ ಪುಣ್ಯಾಹ ವಾಚನ, ಪ್ರತಿಷ್ಠಾ ಹೋಮ, ಪ್ರಧಾನ ಹೋಮ, ಪ್ರತಿಷ್ಠಾ ಕಲಶ ನಡೆಯಿತು.
ಬೆಳಗ್ಗೆ 8.32ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀದೇವಿಯ ಬಿಂಬ ಪ್ರತಿಷ್ಠೆ ನಡೆಯಿತು. ಬಳಿಕ ಪ್ರಾಯಶ್ಚಿತ ಪೂರ್ವಕ ಚಂಡಿಕಾ ಯಾಗ ನಡೆದು ಪೂರ್ಣಾಹುತಿ, ಮಹಾಪೂಜೆ, ಸುವಾಸಿನಿ ಪೂಜೆ, ಬ್ರಾಹ್ಮಣ ಆರಾಧನೆ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ವೇದಮೂರ್ತಿ ಕಲ್ಲಾಪು ನಾರಾಯಣ ಭಟ್ ಆಶೀರ್ವಚನ ನೀಡಿ, ದೇವರ ಭಯವೇ ಜ್ಞಾನದ ಆರಂಭ ವಾಗಿದ್ದು, ಕಷ್ಟ ಕಾಲ ಕಳೆದು ದೇವರನ್ನು ಪ್ರತಿಷ್ಠೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ದೇವರ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳನ್ನು ನಡೆಸಿಕೊಂಡು ಹೋಗಬೇಕಾಗಿದೆ ಎಂದರು.
ಮಾನಂಪಾಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಚಂದಪ್ಪ ಗುರಿಕಾರ, ಆಡಳಿತ ಮೊಕ್ತೇಸರ ಪುರಂದರ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/02/2021 11:21 am