ಅಜ್ಜಿಯ ಜಿ.ಪಿ.ಎ. ಬಳಸಿ 25 ಲಕ್ಷ ರೂ. ಸಾಲ ಪಡೆದು ವಂಚಿಸಿದ ಘಟನೆಗೆ ಸಂಬಂಧಿಸಿದಂತೆ ಪಬ್ಲಿಕ್ ನೆಕ್ಸ್ಟ್ ಸರಣಿ ವರದಿ ಆರಂಭಿಸಿದ್ದು, ಅಜ್ಜಿಯ ಜಿ.ಪಿ.ಎ. ಬಳಸಿ ಮೊಮ್ಮಗ ಪಡೆದ ಸಾಲದ ಹಣವನ್ನು ವಂಚಿಸಿರುವುದನ್ನು ಸ್ವತಃ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ಒಪ್ಪಿಕೊಂಡಿರುವುದು ಬಹಿರಂಗವಾಗಿದೆ! ಈ ಬಗ್ಗೆ ವೀಡಿಯೊ ದಾಖಲೆಗಳೂ ಕೂಡಾ ಇದ್ದು, ಎರಡನೇ ಸುತ್ತಿನ ದಾಖಲೆಗಳನ್ನು ಪಬ್ಲಿಕ್ ನೆಕ್ಸ್ಟ್ ಬಿಡುಗಡೆಗೊಳಿಸುತ್ತಿದೆ.
ವೀಡಿಯೊದಲ್ಲಿ ಮಾಸ್ ಇಂಡಿಯಾ ಹೆಸರಿನ ಸಂಸ್ಥೆಯ ಅಧಿಕಾರಿಯೊಬ್ಬರು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಜೊತೆಗೆ ಮಾತುಕತೆ ನಡೆಸಿದ್ದಾರೆ. ಸೀನಿಯರ್ ಸಿಟಿಜನ್ ಆಗಿರುವ ವೃದ್ಧೆ ಪುಟ್ಟಿ ಪೂಜಾರ್ತಿಗೆ ಅನ್ಯಾಯವಾಗಲು ಮಾಸ್ ಇಂಡಿಯಾ ಬಿಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಿ ಪೂಜಾರ್ತಿಯ ಜಿ.ಪಿ.ಎ. ಬಳಸಿ ಮೊಮ್ಮಗ ನಾಗರಾಜನ ಹೆಸರಿನಲ್ಲಿ ಪಡೆಯಲಾದ ಸಾಲವನ್ನು ನಾಗರಾಜನ ಪಾರ್ಟ್ ನರ್ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ.
ಅಂದರೆ ಇದೆಲ್ಲವೂ ಸೊಸೈಟಿಯ ಅಧಿಕಾರಿಗಳಿಗೆ ಗೊತ್ತಿದ್ದೇ ನಡೆದಿರುವ ವಂಚನೆ ಎನ್ನುವುದು ಜಗಜ್ಜಾಹೀರಾಗಿದೆ. ಅಲ್ಲದೇ ನಾಗರಾಜ ಪೂಜಾರಿ ಹಾಗೂ ದಿನೇಶ ಮೊಗವೀರನ ಫೋನ್ ಸಂಭಾಷಣೆಯಲ್ಲಿಯೂ ಈ ಬಗ್ಗೆ ಸ್ಪಷ್ಟತೆ ಎದ್ದು ಕಾಣಿಸುತ್ತದೆ.
ಸಾಲದ ವ್ಯವಹಾರಗಳಿಗಾಗಿ ಮಾಡಲಾದ ಜಿ.ಪಿ.ಎ. ಅಜ್ಜಿಯ ಹೆಸರಲ್ಲಿದ್ದರೂ ಮೊಮ್ಮಗನಿಗೆ 25 ಲಕ್ಷ ಮೊತ್ತದ ಸಾಲ ಮಂಜೂರಾತಿ ಮಾಡಲು ಸೊಸೈಟಿ ಕಾಯಿದೆಗಳ ಪ್ರಕಾರ ಅವಕಾಶವಿದೆಯೇ? ಸ್ವತಃ ಅಜ್ಜಿಯೇ 3 ಲಕ್ಷ ಸಾಲಕ್ಕಾಗಿ ಅರ್ಜಿ ಹಾಕಿದ್ದಾಗ 2 ಲಕ್ಷ ಮಾತ್ರ ಸಾಲ ಮಂಜೂರು ಮಾಡಿದ್ದ ಸೊಸೈಟಿ, ಮೊಮ್ಮಗನ ಹೆಸರಿನಲ್ಲಿ 25 ಲಕ್ಷ ಸಾಲ ಹೇಗೆ ನೀಡಿತು? ಎನ್ನುವುದು ಸಮಗ್ರ ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ. ಇನ್ನಷ್ಟು ದಾಖಲೆಗಳು ಪಬ್ಲಿಕ್ ನೆಕ್ಸ್ಟ್ ಬಳಿ ಇದ್ದು, ಅಜ್ಜಿಗೆ ನ್ಯಾಯ ದೊರಕದೇ ಇದ್ದಲ್ಲಿ ಪಬ್ಲಿಕ್ ನೆಕ್ಷ್ಟ್ ಹೋರಾಟ ಮುಂದುವರೆಯಲಿದೆ.
PublicNext
06/10/2022 07:55 pm