ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಗಾಣದಬೆಟ್ಟು ಎಂಬಲ್ಲಿ 14ನೇ ಶತಮಾನದ ವೈಷ್ಣವ ಪಂಥದ ಶಿಲಾ ಶಾಸನ ಪತ್ತೆಯಾಗಿದೆ ಗಾಣದಬೆಟ್ಟು ಅಮ್ಮು ಶೆಟ್ಟಿ ಎಂಬುವರ ಜಾಗದಲ್ಲಿ ಈ ಶಾಸನ ಪತ್ತೆಯಾಗಿದ್ದು ಇದು ಸುಮಾರು 1409 ಇಸವಿಯದ್ದಾಗಿರಬಹುದೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಎಸ್ಎ ಕೃಷ್ಣಯ್ಯ ಹಾಗೂ ಕಡಿಯಾಳಿ ಯು. ಕಮಲಾಬಾಯಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಕೆ ಶ್ರೀಧರ ಭಟ್ ಇವರ ಮಾರ್ಗದರ್ಶನದಲ್ಲಿ ಫ್ಲೀಚ್ ಇಂಡಿಯಾ ಫೌಂಡೇಶನ್ ಹೈದರಾಬಾದ್ ಇದರ ಸಹಾಯಕ ಸಂಶೋಧಕ ಶ್ರುತೇಶ್ ಆಚಾರ್ಯ ಶಿಲಾಶಾಸನವನ್ನು ಓದಿ ಅಧ್ಯಯನ ನಡೆಸಿದ್ದಾರೆ.
ಶಿಲಾ ಶಾಸನದ ಮೇಲ್ಭಾಗದಲ್ಲಿ ಸೂರ್ಯ ಚಂದ್ರ ಹಾಗೂ ಶಂಖ ಚಕ್ರಗಳ ಕೆತ್ತನೆಯನ್ನು ಕೆತ್ತಲಾಗಿದೆ ಇದು ವೈಷ್ಣವ ಪಂಥದ ಶಿಲಾ ಶಾಸನ ವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
1409 ಇಸವಿಯ ನವಂಬರ್ 7 ರ ಗುರುವಾರದಂದು ಇದನ್ನು ಸ್ಥಾಪಿಸಿರಬಹುದೆಂದು ಊಹಿಸಲಾಗಿದೆ .ಈ ಶಾಸನದಲ್ಲಿ 14ನೇ ಶತಮಾನದ ಕನ್ನಡವನ್ನು ಬಳಕೆ ಮಾಡಲಾಗಿದ್ದು ಇದು ವಿಜಯನಗರ ಕಾಲದ ಕನ್ನಡ ಲಿಪಿಯನ್ನು ಹೋಲುತ್ತದೆ.
ಈ ಶಾಸನದಲ್ಲಿ 10 ಸಾಲುಗಳನ್ನು ಬರೆಯಲಾಗಿದೆ. ಸುಮಾರು ಮೂರು ಅಡಿ ಎತ್ತರ ಎರಡು ಅಡಿ ಅಗಲ ಹೊಂದಿರುವ ಶಾಸನವು ಗ್ರಾನೈಟ್ ಕಲ್ಲಿನಿಂದ ಕೊರೆಯಲ್ಪಟ್ಟಿದೆ. ಈ ಶಾಸನದಲ್ಲಿ ಶಕ ವರುಷ1331ನೇ ಮಾರ್ಗಶಿರ ಶುದ್ಧ೧ ಗುರುವಾರ ಅಂದರೆ ಇತಿಹಾಸ ಸಂಶೊಧಕರ ಲೆಕ್ಕಾಚಾರದ ಪ್ರಕಾರ 1409ನೇ ಇಸವಿಯ ವಿರೋಧಿ ಸಂವತ್ಸರದ ನವೆಂಬರ್ 7 ಗುರುವಾರದ ದಿನಕ್ಕೆ ಸರಿಹೊಂದುತ್ತದೆ.
ಈ ಶಾಸನದಲ್ಲಿ ಮಂಣ್ಣೆ( ಪ್ರಸ್ತುತ ಮರ್ಣೆ ಗ್ರಾಮ)ಯ ಆಜಕಾರ ವಿಷ್ಣು ದೇವರ ದೀವಿಗೆಗೆ ಕಾತು ಮೂಲಿಗ(ಮೊಯ್ಲಿ ಸಮುದಾಯ ಇರಬಹುದು) ಎಂಬವರು ಬೆಟ್ಟಿಂ ಪ್ರದೇಶದಿಂದ (ಗಾಣದಬೆಟ್ಟು) ಎಣ್ಣೆಯನ್ನು ಮತ್ತು 11 ತೆಂಗಿನಕಾಯಿಗಳನ್ನು ದಾನವಾಗಿ(ಉಂಬಳಿ) ಬಿಟ್ಟಿರುವ ಕುರಿತು ಶಾಸನದಲ್ಲಿ ಉಲೇಖವಾಗಿದೆ. ಈ ಶಾಸನವು ಪತ್ತೆಯಾಗಿರುವ ಸಮೀಪದಲ್ಲಿ ಪುರಾತನ ವಿಷ್ಣುಮೂರ್ತಿ ದೇವಸ್ಥಾನವಿದ್ದು ಶಾಸನದಲ್ಲಿ ದೇವಸ್ಥಾನದ ಉಲ್ಲೇಖವಿದ್ದು ಭಾರೀ ಮಹತ್ವ ಪಡೆದುಕೊಂಡಿದೆ.
Kshetra Samachara
22/09/2022 11:56 am