ಕುಂದಾಪುರ: ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯ ನೀರು ಕಲುಷಿತಗೊಂಡಿದ್ದು ಕೆಲವು ದಿನಗಳ ಅಂತರದಲ್ಲಿ ಹಲವಾರು ಮೀನುಗಳು ಸಾಯುತ್ತಿದ್ದು ಈ ಬಗ್ಗೆ ದೇವಸ್ಥಾನದವರು, ಸ್ಥಳೀಯಾಡಳಿತ ಹಾಗೂ ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮವಹಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಹಲವು ವರ್ಷಗಳ ಇತಿಹಾಸವಿರುವ ಕೋಟಿತೀರ್ಥ ಪುಷ್ಕರಣಿ ಸುಮಾರು 4 ಎಕರೆ ವಿಸ್ತೀರ್ಣದ್ದಾಗಿದ್ದು ಈಶಾನ್ಯ ದಿಕ್ಕಿನಲ್ಲಿ ಕೊಳಚೆ ನೀರು ಜಿನುಗಿ ಬರುತ್ತಿದ್ದು ಕೆರೆಯ ನೀರು ಕಲುಷಿತಗೊಳ್ಳುತ್ತಿದೆ. ಇದರಿಂದಾಗಿ ನೀರು ವಿಪರೀತವಾಗಿ ದುರ್ವಾಸನೆ ಬೀರುತ್ತಿದ್ದು ಕೆರೆಯಲ್ಲಿರುವ ಮೀನುಗಳು ಸಾಯುತ್ತಿದ್ದು ಕೆರೆಯ ನೀರಿನ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಪದರದಂತೆ ಕಂಡುಬರುತ್ತಿದೆ. ಪುಷ್ಕರಣಿ ಈಶಾನ್ಯ ಭಾಗದಲ್ಲಿ ಚರಂಡಿಯೊಂದು ಹರಿಯುತ್ತಿದ್ದು ಅಲ್ಲಿಗೆ ಕೆಲವು ಉದ್ಯಮದವರು ಕಲುಷಿತ ನೀರನ್ನು ಬಿಡುತ್ತಾರೆ. ಆ ಚರಂಡಿಯಲ್ಲಿ ನೀರು ತುಂಬಿದಾಗ ದೇವಸ್ಥಾನದ ಕೆರೆ, ನೆರೆಹೊರೆಯ ಪರಿಸರ, ಕೃಷಿಭೂಮಿಗೂ ನೀರು ನುಗ್ಗುತ್ತಿದೆ. ಅಲ್ಲದೇ ಸಮೀಪದ ಹದಿನೈದಕ್ಕೂ ಅಧಿಕ ಮನೆಗಳ ಬಾವಿಯ ನೀರು ಹಾಳಾಗುತ್ತಿದೆ ಎಂದು ಸ್ಥಳೀಯರಿಂದ ಆರೋಪ ಕೇಳಿಬಂದಿದೆ. ನಿತ್ಯ ಈ ಪುಷ್ಕರಣಿಯ ನೀರಿನಿಂದ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ ಬರುವ ಭಕ್ತರು ಕೂಡ ಸ್ನಾನ ಹಾಗೂ ತೀರ್ಥ ಪ್ರೋಕ್ಷಣೆ ಮಾಡುವ ಸಂಪ್ರದಾಯ ಕೂಡ ಇದ್ದು ಇದೀಗಾ ನೀರು ಸಂಪೂರ್ಣ ರಾಡಿಯಾಗಿದೆ.
ಗ್ರಾಮ ಪಂಚಾಯತಿಗೆ ಮನವಿ: ಕೆರೆಯ ನೀರು ಕಲುಷಿತಗೊಳ್ಳುತ್ತಿದ್ದು ನಿತ್ಯ ಇದೇ ನೀರಿನಲ್ಲಿ ದೇವರಿಗೆ ಅಭಿಷೇಕ ಮಾಡಲಾಗುತ್ತದೆ. ಅಲ್ಲದೆ ಭಕ್ತರು ಇದರಲ್ಲಿ ಸ್ನಾನ ಮಾಡುವ ಕಾರಣ ಅನಾರೋಗ್ಯ ಸಮಸ್ಯೆಗಳು ಸೃಷ್ಟಿಯಾಗಲಿದೆ. ಈ ಕುರಿತು ಸ್ಥಳೀಯಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋಟೇಶ್ವರ ಗ್ರಾ.ಪಂ.ಗೆ ಸಾರ್ವಜನಿಕರು ದೂರು ನೀಡಿದ್ದಾರೆ.
Kshetra Samachara
07/10/2022 05:17 pm