ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲೂ 40% ಕಮಿಷನ್ ಸದ್ದು, ಕೆಲಹೊತ್ತು ಗದ್ದಲಕ್ಕೆ ಕಾರಣವಾಯಿತು. ಮಲ್ಪೆ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಸಂಬಂಧಿಸಿ ಉಡುಪಿ ಶಾಸಕರ ವಿರುದ್ಧದ 40% ಕಮಿಷನ್ ಆರೋಪ ಕೇಳಿ ಬಂದಾಗ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರುಗಳ ಮಧ್ಯೆ ತೀವ್ರ ಚರ್ಚೆ ನಡೆಯಿತು.
ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.ಈ ವೇಳೆ ವಿಷಯ ಪ್ರಸ್ತಾಪಿಸಿದ ಗಿರೀಶ್ ಅಂಚನ್, ವಿಪಕ್ಷ ನಾಯಕ ರಮೇಶ್ ಕಾಂಚನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಘುಪತಿ ಭಟ್ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಲಾಗಿದೆ. ಇದು ಸತ್ಯ ವಿಚಾರವಲ್ಲ. ನಮ್ಮಲ್ಲಿ ಯಾರೂ ಕಮಿಷನ್ ಪಡೆದುಕೊಳ್ಳುವುದಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕಾಂಚನ್, ಪ್ರತಿಭಟನೆ ನಡೆಸುವುದು ಪ್ರತಿಪಕ್ಷದವರ ಹಕ್ಕು. ಇಂತಹ ಸಂದರ್ಭದಲ್ಲಿ ರಾಜಕೀಯ ಆರೋಪ ಮಾಡುವುದು ಸಾಮಾನ್ಯ ಎಂದು ತಿಳಿಸಿದರು. ರಘುಪತಿ ಭಟ್ ಮಾತನಾಡಿ, ನಮ್ಮ ಮೇಲೆ ಆರೋಪ ಮಾಡಿದರೆ ಅವರ ಯೋಗ್ಯತೆ ಗೊತ್ತಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಪಕ್ಷದ ಜನಪ್ರತಿನಿಧಿಗಳು ಕೂಡ 40% ಕಮಿಷನ್ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಹದಗೆಟ್ಟ ರಸ್ತೆಗಳ ಕುರಿತ ರಮೇಶ್ ಕಾಂಚನ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್, ನಗರದ ಯಾವುದೇ ರಸ್ತೆ ಕಾಮಗಾರಿಗಳು ಕೂಡ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿಲ್ಲ. ನವೆಂಬರ್‌ನಲ್ಲಿ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡುವ ಮೂಲಕ ರಸ್ತೆಯ ಗುಂಡಿ ಮುಕ್ತ ನಗರ ಮಾಡಲಾಗುವುದು ಎಂದು ತಿಳಿಸಿದರು.
ಅಂಬಾಗಿಲು, ಗುಂಡಿಬೈಲು ಕಲ್ಸಂಕ ಮಾರ್ಗದಲ್ಲಿ ಬಸ್‌ಗಳೇ ಬರುತ್ತಿಲ್ಲ. ಪರ್ಮಿಟ್ ಇದ್ದರೂ ಬಾರದ ಬಸ್‌ಗಳ ವಿರುದ್ಧ ಆರ್‌ಟಿಓ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಂತಹ ಬಸ್‌ಗಳ ಪರ್ಮಿಟ್ ರದ್ದುಗೊಳಿಸಬೇಕು ಎಂದು ಸದಸ್ಯ ಪ್ರಭಾಕರ ಪೂಜಾರಿ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋಟಾರು ವಾಹನ ನಿರೀಕ್ಷಕ ಸಂತೋಷ್ ಶೆಟ್ಟಿ, ಈ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ನರ್ಮ್ ಬಸ್ ಹಾಗೂ ಖಾಸಗಿ ಬಸ್‌ಗಳು ಒಂದೇ ಮಾರ್ಗದಲ್ಲಿ ಪೈಪೋಟಿ ಮಾಡುವ ಬದಲು ಬಸ್ ಇಲ್ಲದ ಮಾರ್ಗಗಳಲ್ಲಿ ನರ್ಮ್ ಬಸ್‌ಗಳನ್ನು ಓಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ರಘುಪತಿ ಭಟ್ ಸೂಚಿಸಿದರು.
PublicNext
01/10/2022 06:28 pm