ಮುಲ್ಕಿ: ಬಳ್ಕುಂಜೆ, ಕೊಲ್ಲೂರು ಮತ್ತು ಉಳೆಪಾಡಿ ಗ್ರಾಮಗಳ ಭೂ ಸಂತ್ರಸ್ತರ ಸಭೆಯು ಬಳ್ಕುಂಜೆ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಮೂರು ಗ್ರಾಮಗಳ ಸುಮಾರು 1091 ಎಕರೆ ಕೃಷಿ ಪ್ರದೇಶವನ್ನು ಪ್ರದೇಶವನ್ನು ಕೈಗಾರಿಕೆಗಳಿಗಾಗಿ ಭೂಸ್ವಾಧೀನ ಪಡಿಸುವ ಪ್ರಕ್ರಿಯೆ ಈಗಾಗಲೇ ಸ್ಥಗಿತಗೊಂಡಿದ್ದು, ಈ ಪ್ರದೇಶದ ಸುಮಾರು ಶೇ. 80 ಗ್ರಾಮಸ್ಥರು ಕೈಗಾರಿಕೆಗಳಿಗೆ ಭೂಸ್ವಾಧೀನ ಪಡಿಸುವುದನ್ನು ವಿರೋಧಿಸಿದ್ದಾರೆ ಎಂದು ನಿರ್ಣಯ ಕೈಗೊಳ್ಳಲಾಯಿತು.
ಈ ನಡುವೆ ಮೂರು ಗ್ರಾಮಗಳಲ್ಲಿ ಕೆಲ ಗಾಳಿ ಸುದ್ದಿಗಳು, ಸುಳ್ಳು ಮಾಹಿತಿ ಹರಡುತ್ತಿದ್ದು ಯಾವುದಕ್ಕೂ ಜನ ಕಿವಿಗೊಡಬಾರದು ಎಂದು ವಕೀಲರಾದ ಶಶಿಧರ ಅಡ್ಕತ್ತಾಯ ಹೇಳಿ ಭೂ ಸಂತ್ರಸ್ತರಿಗೆ ಕಾನೂನು ಮಾಹಿತಿಗಳನ್ನು ತಿಳಿಸಿದರು.
ಈ ಹಿಂದೆ ಬೆಳ್ಮಣ್ಣು ಪರಿಸರದಲ್ಲಿ ಕೈಗಾರಿಕೆಗಳಿಗಾಗಿ ಸುಮಾರು ಒಂದು ಸಾವಿರ ಎಕರೆ ಕೃಷಿ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಾಗ ಅಲ್ಲಿನ ಗ್ರಾಮಸ್ಥರು ತೀವ್ರ ಹೋರಾಟ ನಡೆಸಿ ಡಿ ನೋಟಿಫೈ ಮಾಡಲು ಯಶಸ್ವಿಯಾಗಿದ್ದರು ಎಂದು ಕ್ಸೇವಿಯರ್ ಡಿಮೆಲ್ಲೋ ಹಾಗೂ ಸೀತಾರಾಮ್ ಭಟ್ ಮಾಹಿತಿ ನೀಡಿದರು.
ಕೈಗಾರಿಕೆಗಳಿಗೆ ಮುಲ್ಕಿ ತಾಲೂಕು ವ್ಯಾಪ್ತಿಯ ಎಂಟು ಗ್ರಾಮಗಳಿಗೆ ನೀರಿನ ಯೋಜನೆ ಪೂರೈಕೆ ಯಾಗುವ ಕೊಲ್ಲೂರು ಪ್ರದೇಶ ಭೂಸ್ವಾಧೀನ ಪಟ್ಟಿಯಲ್ಲಿದ್ದು, ಇದಕ್ಕೆ ಎಂಟು ಗ್ರಾಮ ಪಂಚಾಯತ್ ಅಧ್ಯಕ್ಷರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು
ಬಳ್ಕುಂಜೆ ಪರಿಸರದಲ್ಲಿ ಕೆಲವರು ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ರೈತರು ಗಾಳಿ ಸುದ್ದಿಗಳನ್ನು ನಂಬಬಾರದು, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ಹೋರಾಟ ನಿರಂತರ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಸಭೆಯಲ್ಲಿ ಭೂಸಂತ್ರಸ್ತರ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
30/09/2022 11:49 am