ಮಂಗಳೂರು: ಸಿಎಂ ಬೊಮ್ಮಾಯಿ ಹಾಗೂ ಸಚಿವ ಸುನಿಲ್ ಕುಮಾರ್ ಬಿಲ್ಲವ ನಿಗಮ ಮಂಡಳಿ ಸ್ಥಾಪನೆ ಮಾಡದೇ ಕೇವಲ 5 ಕೋಟಿ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡುತ್ತೇವೆ ಎಂದು ಹೇಳಿ ಈಡಿಗ ಬಿಲ್ಲವ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ ಎಂದು ಮಂಗಳೂರಿನಲ್ಲಿಂದು ಕಲಬುರಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
ಸಚಿವ ಸುನಿಲ್ ಕುಮಾರ್, ಸಮುದಾಯವನ್ನು ಸಂಪೂರ್ಣ ದಾರಿ ತಪ್ಪಿಸಿ, ತಮ್ಮ ರಾಜಕೀಯ ಲಾಭಕ್ಕೆ ಬಿಲ್ಲವ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ. ಯಾಕೆ ಅವರಿಗೆ 500 ಕೋಟಿ ರೂ. ಅನುದಾನದಲ್ಲಿ ನಿಗಮ ಮಂಡಳಿ ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಬಿಲ್ಲವ ಸಮುದಾಯದ ಪ್ರತಿಯೊಂದು ಮನೆಗೂ ತೆರಳಿ ಜಾಗೃತಿ ಮೂಡಿಸುವ ಕಾರ್ಯ ಮಾಡಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ದ.ಕ.ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಕನಿಷ್ಠ ಪಕ್ಷ 3 ಮಂದಿ ಅಭ್ಯರ್ಥಿಗಳಿಗಾದರೂ ಟಿಕೆಟ್ ನೀಡಬೇಕು. ಬಿಲ್ಲವ ಸಮುದಾಯವನ್ನು ರಾಜಕೀಯವಾಗಿ ಬಳಸುವುದನ್ನು ನಾವು ಸಹಿಸೋಲ್ಲ. ಬಿಜೆಪಿಯ ಬ್ರಾಹ್ಮಣಶಾಹಿ ನೇತಾರರ ದಾಸರಾಗಿ ಬಿಲ್ಲವ ಸಮುದಾಯದ ಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ.
ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಕಚೇರಿಯಲ್ಲಿ ಕೆಲಸ ಕೊಡುವ ಬದಲು ಖಾಯಂ ಉದ್ಯೋಗ ನೀಡಿ. ನಾರಾಯಣ ಗುರುಗಳ ಹೆಸರನ್ನು ಮೆಟ್ರೋ, ಬಸ್ ತಂಗುದಾಣಕ್ಕೆ ಇಡುವ ಬದಲು ವಿಧಾನಸಭೆಯ ಅಂಗಣದಲ್ಲಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿ. ಬಿಲ್ಲವ, ಈಡಿಗ ಸಮುದಾಯದ ಕೋಟ, ಓಟು ಬೇಕು. ಬಿಲ್ಲವರು, ಈಡಿಗರು ಬೇಡ. ಸ್ವತಂತ್ರ ಭಾರತದಲ್ಲಿ ಹಿಂದುಳಿದ ವರ್ಗದ ಸಮುದಾಯದ ಮಂದಿ ಅತಂತ್ರರಾಗಿ ಬದುಕುತ್ತಿದ್ದಾರೆ. ಆದ್ದರಿಂದ ನಾನು ಮುಂದಿನ ದಿನಗಳಲ್ಲಿ ವಿಧಾನಸಭೆಗೆ ಪಾದಯಾತ್ರೆ ಮಾಡುವ ಬಗ್ಗೆ 15 ದಿನಗಳಲ್ಲಿ ನಿರ್ಧರಿಸಲಿದ್ದೇನೆ. ಅಲ್ಲದೇ ದ.ಕ.ಜಿಲ್ಲೆಯ ಎಲ್ಲಾ ಬಿಲ್ಲವ ಸಂಘಟನೆಗಳ ಮೂಲಕ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.
PublicNext
20/09/2022 01:51 pm