ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ಎಂಬಲ್ಲಿ ಜಾನ್ ಡಿಸಿಲ್ವ ಮಾಲೀಕತ್ವದಲ್ಲಿ ಗೇರು ಎಣ್ಣೆ ಸಂಸ್ಕರಣಾ ಘಟಕವು ಆರಂಭವಾಗುತ್ತಿದ್ದು, ಇದನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮಿಯ್ಯಾರು ಗ್ರಾಮಸ್ಥರು ಕಾರ್ಕಳ ಉಪ ತಹಸಿಲ್ದಾರ್ ಮಂಜುನಾಥ್ ನಾಯಕ್ ಅವರಿಗೆ ಮನವಿ ಸಲ್ಲಿಸಿದರು .
ಈ ಸಂದರ್ಭದಲ್ಲಿ ಮಿಯ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ಅಮೀನ್ ಮಾತನಾಡಿ, ಪರಿಸರಕ್ಕೆ ಹಾಗೂ ಜನರ ಆರೋಗ್ಯಕ್ಕೆ ಹಾನಿಕಾರ ವಾಗುವಂತಹ ಇಂತಹ ಘಟಕವನ್ನು ಯಾವುದೇ ಕಾರಣಕ್ಕೂ ಆರಂಭಿಸಲು ನಾವು ಅವಕಾಶ ನೀಡುವುದಿಲ್ಲ. ಈ ಕುರಿತು ಈಗಾಗಲೇ ಗ್ರಾಮ ಪಂಚಾಯತಿನಲ್ಲಿ ಘಟಕ ಸ್ಥಾಪನೆ ಅವಕಾಶ ನೀಡದಂತೆ ನಿರ್ಣಯ ಮಾಡಲಾಗಿದೆ.
ಆದರೆ ಸ್ಥಳೀಯರ ವಿರೋಧದ ನಡುವೆಯೂ ಕಾರ್ಖಾನೆಯ ಮಾಲೀಕರು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪರಿಸರ ಇಲಾಖೆಯ ಅನುಮತಿ ಪಡೆದಿರುತ್ತಾರೆ. ಜಾನ್ ಡಿಸಿಲ್ವ ಅವರು ಸ್ಥಾಪಿಸಲು ಮುಂದಾಗಿರುವ ಅಪಾಯಕಾರಿ ರಾಸಾಯನಿಕ ಹೊರ ಸೂಸುವ ಘಟಕದ ಸುತ್ತಮುತ್ತ ಸುಮಾರು 300ಕ್ಕೂ ಅಧಿಕ ಮನೆಗಳಿದ್ದು, ಅಲ್ಲದೆ ಶಿಕ್ಷಣ ಸಂಸ್ಥೆಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಧಾರ್ಮಿಕ ಕೇಂದ್ರಗಳು ಇರುವುದರಿಂದ ಯಾವುದೇ ಕಾರಣಕ್ಕೂ ಈ ಘಟಕ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಗಿರೀಶ್ ಅಮೀನ್ ಹೇಳಿದ್ದಾರೆ.
ಮನವಿ ಸ್ವೀಕರಿಸಿದ ಬಳಿಕ ಉಪತಹಶೀಲ್ದಾರ್ ಮಂಜುನಾಥ್ ನಾಯಕ್ ಮಾತನಾಡಿ, ಈ ಕುರಿತು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಅಮೀನ್ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
14/09/2022 04:59 pm