ಕಾಪು: ಹಿಂದಿ ದಿವಸ್ ಆಚರಣೆ ವಿರೋಧಿಸಿ ಕಾಪು ಪೇಟೆಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಯಿತು. ಜೆಡಿಎಸ್ ಪಕ್ಷದ ವತಿಯಿಂದ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಯೋಗೀಶ್ ವಿ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಪ್ರಾದೇಶಿಕತೆಗೆ ಹೆಚ್ಚಿನ ಒತ್ತು ನೀಡಬೇಕಿದ್ದು,ಇಂತಹ ಸಂದರ್ಭದಲ್ಲಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ನೀಡಲಾಗ್ತಿದೆ. ಇದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ಭಾಷಾ ವಿರೋಧಿ ನೀತಿಯಾಗಿದೆ. ಆಯಾ ರಾಜ್ಯ ಜಿಲ್ಲೆ ಮತ್ತು ಸ್ಥಳೀಯ ಪ್ರದೇಶಗಳ ಭಾಷೆಗಳಿಗೆ ಒತ್ತು ನೀಡಿದಾಗ ಮಾತ್ರ ರಾಜ್ಯಕ್ಕೂ ದೇಶಕ್ಕೂ ಒಳಿತಾಗುತ್ತದೆ. ಹಿಂದಿ ಭಾಷೆಯನ್ನು ಹೇರುವ ಮೂಲಕ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡಲಾಗುತ್ತಿದೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಕಪ್ಪ ಎ, ವೈವಿಧ್ಯಮಯವಾದ ಸಂಸ್ಕೃತಿ, ಭಾಷೆ ಮತ್ತು ಸಂಸ್ಕಾರವನ್ನು ಹೊಂದಿರುವ ಭಾರತದಲ್ಲಿ ಹಿಂದಿ ಭಾಷೆಗೆ ಮಾತ್ರ ಪ್ರಾಮುಖ್ಯತೆ ಕೊಡುವ ಕೇಂದ್ರ ಸರಕಾರದ ನಿರ್ಧಾರ ಖಂಡನೀಯವಾಗಿದೆ. ಈ ಬಗ್ಗೆ ಜನರೆಲ್ಲರೂ ಜಾಗೃತರಾಗಬೇಕಿದೆ ಎಂದರು.
Kshetra Samachara
14/09/2022 01:56 pm