ಮಂಗಳೂರು: ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯದ ಅಧಿಕಾರಿಗಳ ಅಧ್ಯಯನ ತಂಡ ಗುರುವಾರ ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಈ ವೇಳೆ ತಂಡ ಅತಿವೃಷ್ಟಿಯಿಂದ ಹಾನಿಗೀಡಾದ ಕಡಲ ತೀರ, ರಸ್ತೆಗಳು, ಸೇತುವೆಗಳು, ಮನೆಗಳನ್ನು ಪರಿಶೀಲನೆ ನಡೆಸಿತು.
ಅಧ್ಯಯನ ತಂಡ ವಿಪರೀತ ಕಡಲ್ಕೊರೆತ ಉಂಟಾಗಿರುವ ಉಳ್ಳಾಲದ ಬಟಪ್ಪಾಡಿಗೆ ತೆರಳಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿತು. ರಸ್ತೆ ಹಾನಿ, ಕಡಲ್ಕೊರೆತದಿಂದ ಆಗಿರುವ ಹಾನಿಯನ್ನು ವೀಕ್ಷಿಸಿದ ತಂಡವು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿತು. ಬಳಿಕ ಹೊಸಬೆಟ್ಟು - ಮೀನಕಳಿಯಕ್ಕೆ ತೆರಳಿದ ತಂಡ ಅಲ್ಲಿನ ಕಡಲ್ಕೊರೆತ, ರಸ್ತೆ ಹಾನಿ, ತೀವ್ರ ಮಳೆಯಿಂದಾಗಿ ಮನೆಗಳಿಗಾದ ಹಾನಿ ಸೇರಿದಂತೆ ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಿತು.
ದ.ಕ.ಜಿಲ್ಲೆಯಲ್ಲಿ ಜುಲೈನಿಂದ ಸುರಿದಿರುವ ತೀವ್ರ ಮಳೆಯಿಂದಾಗಿ ಕೃಷಿ ಹಾಗೂ ತೋಟಗಾರಿಕಾ ಬೆಳಗಳು, ಮೂಲಭೂತ ಸೌಕರ್ಯಗಳು ಹಾನಿಗೀಡಾಗಿದ್ದು ಸೇರಿದಂತೆ, ಜನರು ಹಾಯ ಜಾನುವಾರುಗಳ ಜೀವ ಹಾನಿ ಬಗ್ಗೆ ಅಧ್ಯಯನ ನಡೆಸಲು ಆಗಮಿಸಿರುವ ತಂಡಕ್ಕೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮಾಹಿತಿ ನೀಡಿದರು. ಅದೇ ರೀತಿ ಅತಿವೃಷ್ಟಿಯ ಪರಿಹಾರಕ್ಕಾಗಿ ಒಟ್ಟು 311 ಕೋಟಿ ರೂ. ನೀಡಬೇಕೆಂಬ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಉಂಟಾದ ಕಡಲ್ಕೊರೆತದ ಹಾಗೂ ಇತರೆ ಹಾನಿಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದ ತಂಡವು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿತು.
Kshetra Samachara
08/09/2022 09:50 pm