ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟಂಬರ್ 2ರಂದು ಮಂಗಳೂರು ಭೇಟಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ಸೇರಿಸಿ ವಾಹನ ಸಹಿತ ಸರ್ಕಾರವೇ ನೇಮಿಸಿದ ಸುತ್ತೋಲೆಯೊಂದು ವೈರಲ್ ಆಗಿದ್ದು, ಮೋದಿ ವಿರೋಧಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಇದೊಂದು ಚುನಾವಣಾ ಹಿನ್ನೆಲೆಯ ತಯಾರಿ ಕಾರ್ಯಕ್ರಮವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೂ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ವ್ಯಂಗ್ಯಭರಿತ ಅಸಮಾಧಾನವನ್ನು ಮುನೀರ್ ಕಾಟಿಪಳ್ಳ ಹೊರಹಾಕಿದ್ದಾರೆ. "ಇದು ಅದ್ಭುತ. ಮೋದಿಯವರ ಸಭೆಗೆ ಜನ ಸೇರಿಸಲು ಪಂಚಾಯತ್ ಮಟ್ಟದಿಂದ ಸಾರ್ವಜನಿಕರನ್ನು ಕರೆದುಕೊಂಡು ಹೋಗಲು ಗ್ರಾಮ ಪಂಚಾಯತ್ ಸಿಬ್ಬಂದಿಗಳನ್ನು ವಾಹನ ಸಹಿತ ಸರಕಾರವೇ ನೇಮಿಸಿರುವ ಸುತ್ತೋಲೆ ಹೊರ ಬಿದ್ದಿದೆ. ಮೋದಿಯವರ ಚುನಾವಣಾ ಸಿದ್ದತೆಯ ಸಭೆಗೆ ಜನ ಸೇರಿಸಲು ಬಿಜೆಪಿಗೆ ಯಾವ ಖರ್ಚು, ಒತ್ತಡ ಇಲ್ಲ. ಎಲ್ಲವೂ ಸರಕಾರದ ವತಿಯಿಂದ. ಸೇರುವ "ಒಂದು ಲಕ್ಷ" ಜನರಿಗೆ ಬೆಳಗ್ಗಿನ ಉಪಹಾರವನ್ನೂ ಜಿಲ್ಲಾಡಳಿತವೇ ಮಾಡುತ್ತದಂತೆ. ಹೀಗೆಲ್ಲಾ ಬಲಪ್ರಯೋಗದಿಂದ ಸೇರುವ ಜನರ "ಕ್ರೆಡಿಟ್" ಮಾತ್ರ ಜಿಲ್ಲೆಯ ಬಿಜೆಪಿಗಂತೆ."
"ಬಹುಷ ಇಂಡಿಯಾ ದೇಶಕ್ಕೆ ಪ್ರಧಾನಿಯೊಬ್ಬರು ಸಿಕ್ಕಿದ್ದು ಇದೇ ಮೊದಲು. ಈ ಹಿಂದೆ ದೇಶದಲ್ಲಿ ಪ್ರಧಾನಿಗಳೂ ಇರಲಿಲ್ಲ, ಅವರು ಮಂಗಳೂರಿಗೂ ಬಂದಿರಲಿಲ್ಲ. ಎಲ್ಲವೂ ಮೋದಿ ಉದಯದ ನಂತರವೇ ಸಂಭವಿಸುತ್ತಿದೆ" ಎಂದು ಮುನೀರ್ ಕಾಟಿಪಳ್ಳ ಬರೆದುಕೊಂಡಿದ್ದಾರೆ.
Kshetra Samachara
01/09/2022 04:01 pm