ಮಂಗಳೂರು: ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಯಲ್ಲಿ ಸರಕಾರ, ಜನಪ್ರತಿನಿಧಿಗಳ ಧರ್ಮಾಧಾರಿತ ತಾರತಮ್ಯವನ್ನು ಖಂಡಿಸಿ, ಹಿಂದೂ- ಮುಸ್ಲಿಂ ಸೌಹಾರ್ದತೆಯ ಅಗತ್ಯಗಳನ್ನು ಮುಂದಿಟ್ಟು ಡಿವೈಎಫ್ಐ ಘಟಕ ಮನೆಮನೆ ಅಭಿಯಾನ ನಡೆಸಿತು.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸುರತ್ಕಲ್ ಫಾಝಿಲ್ ಹತ್ಯೆ ಪ್ರಕರಣದಲ್ಲಿ ನೇರ ಭಾಗಿಗಳಾಗದ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹತ್ಯೆಯ ಹಿಂದೆ ಕೋಮು ದ್ವೇಷವಿದೆ ಎಂದು ತಿಳಿದು ಬಂದಿದೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರಕಾರ ನೀಡಿರುವ ಪರಿಹಾರವನ್ನು ಕೊಲೆಯಾದ ಫಾಝಿಲ್ ಹಾಗೂ ಮಸೂದ್ ಕುಟುಂಬಕ್ಕೂ ಕೊಡಬೇಕಿತ್ತು. ಆದರೆ ಈ ಕುರಿತು ಸಿಎಂ ಆದಿಯಾಗಿ ಎಲ್ಲಾ ಜನಪ್ರತಿನಿಧಿಗಳು ಮಾತಾಡದೆ ಮೌನ ವಹಿಸಿರುವುದು, ತಾರತಮ್ಯ ಮಾಡಿರುವುದು ಸರಿಯಲ್ಲ ಎಂದರು.
ಮೂರು ಹತ್ಯೆಯ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತುರ್ತುಸ್ಥಿತಿ ಘೋಷಿಸಲಾಗಿದೆ. ಅಧಿಕಾರಿಗಳು ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದಾರೆ. ಜನರ ಸಂಕಷ್ಟ ಆಲಿಸಬೇಕಾದ ಶಾಸಕರುಗಳು ಕಾಣೆಯಾಗಿದ್ದಾರೆ. ಫಾಝಿಲ್, ಮಸೂದ್ ಮನೆಗೆ ಶಾಸಕರುಗಳು ಸಾಂತ್ವನದ ಭೇಟಿ ನೀಡಬೇಕು. ಪರಿಹಾರ ಧನ ಒದಗಿಸಬೇಕು, ಪ್ರವೀಣ್ ನೆಟ್ಟಾರು, ಫಾಝಿಲ್ ಕೊಲೆಯ ಹಿಂದಿನ ಸೂತ್ರಧಾರರ ಬಂಧನವಾಗಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದರು.
Kshetra Samachara
08/08/2022 01:27 pm