ಮಂಗಳೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆಯ ಹಿಂದೆ ಕೇರಳ ಕೈವಾಡದ ಶಂಕೆಯಿದೆ. ತಕ್ಷಣ ಈ ಬಗ್ಗೆ ತನಿಖೆ ನಡೆಸುವಂತೆ ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಸಜ್ಜನ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯನ್ನು ನಾನು ಖಂಡಿಸುತ್ತೇನೆ. ತನ್ನ ವಿಚಾರ, ಜೀವನದ ಮೂಲಕ ರಾಷ್ಟ್ರಮಾತೆಯ ಆರಾಧನೆ ಪ್ರಮುಖ ಎಂದು ಅವರು ತಿಳಿದುಕೊಂಡಿದ್ದರು. ಆತನ ಮನೆಮಂದಿಗೆ ಎಷ್ಟು ದುಃಖವಿದೆಯೋ ಅಷ್ಟೇ ದುಃಖ ಒಡನಾಡಿ ಸಹೋದರನನ್ನು ಕಳೆದುಕೊಂಡ ನಮಗೂ ಅಷ್ಟೇ ದುಃಖವಿದೆ ಎಂದರು.
ಈ ಘಟನೆಯ ಹಿನ್ನೆಲೆ ಕಂಡಾಗ ಮತೀಯ ಶಕ್ತಿಗಳು ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಅನಿಸುತ್ತಿದೆ. ಹರ್ಷ ಕೊಲೆ ಪ್ರಕರಣ, ಡಿಜೆ ಹಳ್ಳಿ - ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿ ಪ್ರಕರಣಗಳ ಮೂಲಕ ಮತಾಂಧ ಶಕ್ತಿಗಳು ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಪ್ರವೀಣ್ ನೆಟ್ಟಾರು ಹತ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಉತ್ತರ ಕೊಡುವ ಪ್ರಯತ್ನ ಆಗುತ್ತದೆ ಎಂದು ಹೇಳಿದರು.
ಬಿಜೆಪಿ ಯಾವತ್ತೂ ಕಾರ್ಯಕರ್ತರ ಪರ ಇದೆ. ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸಂಪೂರ್ಣ ತನಿಖೆ ನಡೆಸಲು ತಕ್ಕ ಉತ್ತರ ಕೊಡಲು ಸರಕಾರ ಬದ್ಧವಿದೆ. ಬಿಜೆಪಿ ಯುವ ಮೋರ್ಚಾ ನಾಯಕರ ಆಕ್ರೋಶದಿಂದ ರಾಜಿನಾಮೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸಂದರ್ಭ ಆಕ್ರೋಶ ಸಹಜ. ಎಲ್ಲರನ್ನೂ ಕರೆದು ವಿಶ್ವಾಸ ತುಂಬುವ ಕಾರ್ಯ ಆಗುತ್ತದೆ. ಕಾರ್ಯಕರ್ತನ ಹತ್ಯೆಗೆ ನ್ಯಾಯ ಕೊಡುವ ಕಾರ್ಯವನ್ನು ಸರಕಾರ ಮಾಡುತ್ತದೆ. ರಾಜಕಾರಣ ಮಾಡುವುದಿಲ್ಲ ಎಂದು ನಳಿನ್ ಕುಮಾರ್ ಕಟೀಲು ಅವರು ಹೇಳಿದರು.
PublicNext
27/07/2022 08:36 pm