ಮಂಗಳೂರು: ಅಗ್ನಿಪಥ್ ಯೋಜನೆಯಲ್ಲಿ ಸೈನಿಕರಾಗುವ ಯುವಕರು ಅಲ್ಲಿಂದ ಹೊರಬಂದ ಮೇಲೆ ಬಿಜೆಪಿ ವಕ್ತಾರರಾಗುತ್ತಾರೆ. ಸೇನೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲೂ ರಾಜಕೀಯ ಪ್ರೇರಿತ ವ್ಯಕ್ತಿಗಳಾಗಿರುತ್ತಾರೆ. ಇಂತಹ ಸೇನೆಯಿಂದ ನಮ್ಮ ದೇಶ ಎಷ್ಟು ಸುಭದ್ರವಾಗಿರಬಹುದು? ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಪ್ರಶ್ನಿಸಿದ್ದಾರೆ.
ನಗರದ ಕ್ಲಾಕ್ ಟವರ್ ಮುಂಭಾಗ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ʼಅಗ್ನಿಪಥ್ʼ ವಿರುದ್ಧ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಈ ವ್ಯವಸ್ಥೆಯನ್ನು ವಾಪಸ್ ತೆಗೆದುಕೊಳ್ಳದಿದ್ದಲ್ಲಿ ಇಡೀ ದೇಶವನ್ನು ವೈರಿಗಳ ಹಸ್ತದಲ್ಲಿಟ್ಟಂತಾಗುತ್ತದೆ. ಬಿಜೆಪಿಗರು ಅಗ್ನಿಪಥ್ ಜಾರಿಗೊಳಿಸಿ ದೇಶ ವಿರೋಧಿ ವಿಷಬೀಜ ಬಿತ್ತುತ್ತಿದ್ದಾರೆ. ಈ ಬೀಜ ಮುಂದೆ ಹೆಮ್ಮರವಾಗಿ ಇಡೀ ದೇಶವನ್ನು ಕಬಳಿಸುತ್ತದೆ ಎಂದರು.
ನಿರುದ್ಯೋಗ ಸಮಸ್ಯೆ ಕೇವಲ 3 ವರ್ಷ ಕಾಲ ಕೆಲಸ ಕೊಟ್ಟಲ್ಲಿ ಅದು ಬಗೆಹರಿಯೋಲ್ಲ. ಪದವಿ ಹಂತದ ಯುವಕರಿಗೆ ಸೈನಿಕ ತರಬೇತಿ ನೀಡುವ ವ್ಯವಸ್ಥೆಯನ್ನು ಸರಕಾರ ಜಾರಿಗೊಳಿಸಲಿ. ಇದು ಶಿಕ್ಷಣದ ಭಾಗವಾಗಿ ಕಡ್ಡಾಯವಾಗಲಿ. ಆಗ ಯುವಕರಲ್ಲಿ ಶಿಸ್ತು ಬರೋಕೆ ಸಾಧ್ಯ. ಹೀಗಾದಲ್ಲಿ ಯುವಕನೋರ್ವ ಸೇನಾ ಕಮಾಂಡರ್ ವರೆಗಿನ ಹುದ್ದೆಗೇರಲು ಸಾಧ್ಯ. ಇಂತಹ ಅವಕಾಶ ಇರೋವಾಗ ಅಗ್ನಿಪಥ್ ನಂತಹ ಶಾರ್ಟ್ ಕಟ್ ಯೋಜನೆ ಯಾಕೆ? ಇದು ದೇಶದ ಇಡೀ ಸೈನ್ಯವನ್ನು ರಾಜಕೀಯ ವ್ಯವಸ್ಥೆಯನ್ನಾಗಿ ರೂಪಿಸುವ ಹುನ್ನಾರ ಎಂದು ಜೆ.ಆರ್.ಲೋಬೊ ಹರಿಹಾಯ್ದರು.
Kshetra Samachara
02/07/2022 09:39 pm