ಮಂಗಳೂರು: ಕರಾವಳಿಯಲ್ಲಿ ಮತ್ತೆ ಮತ್ತೆ ಸದ್ದು ಮಾಡುತ್ತಿರುವ ಸ್ಯಾಟಲೈಟ್ ಫೋನ್ ವಿಚಾರದಲ್ಲಿ ರಾಜ್ಯ ಸರ್ಕಾರ ಸಕ್ರಿಯವಾದ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದು, ಯಾರನ್ನೂ ಬಿಡುವುದಿಲ್ಲ ಎಂದು ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿ ಪೊಲೀಸರೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಕೇಂದ್ರದ ಅಧಿಕಾರಿಗಳೊಂದಿಗೆ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ. ಎಲ್ಲಿಂದ ಸ್ಯಾಟಲೈಟ್ ಕರೆಗಳು ಆ್ಯಕ್ಟಿವ್ ಆಗುತ್ತಿದೆ ಎಂಬ ಸ್ಥಳದ ಗುರುತು ಪತ್ತೆಯನ್ನು ಕೇಂದ್ರದವರು ಮಾಡುತ್ತಾರೆ. ಕರಾವಳಿಯಲ್ಲಿ ಸಮುದ್ರದಲ್ಲಿ ಸಂಚರಿಸುವ ಹಡಗಿನಿಂದ ಕರೆಗಳು ಆ್ಯಕ್ಟಿವ್ ಆಗಿ ತಪ್ಪಾಗಿ ಅದು ಒಳಗಿನಿಂದ ಆ್ಯಕ್ಟಿವ್ ಆಗಿದೆ ಎಂದು ತೋರಿಸಿತ್ತದೆ. ನಾವು ಯಾವುದನ್ನೂ ಬಿಡುವುದಿಲ್ಲ, ಈ ಫೋನ್ ಕರೆಗಳು ವಿಶೇಷವಾಗಿ ಗಮನ ಹರಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ವಾಸ್ತವ್ಯವಿದ್ದಾರೆ. ಇವರಲ್ಲಿ ಅಕ್ರಮವಾಗಿ ವಾಸವಿರುವವರನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸೂಚಿಸಲಾಗಿದೆ. ಆದ್ದರಿಂದ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಗಳನ್ನು ಕಡ್ಡಾಯವಾಗಿ ಸರ್ವೇ ಮಾಡಿ ಗುರುತಿಸಲು ತಿಳಿಸಲಾಗಿದೆ. ಇನ್ನೆರಡು ವಾರದಲ್ಲಿ ಈ ಪ್ರಕ್ರಿಯೆ ಮುಗಿಸಿ ಪಾಸ್ ಪೋರ್ಟ್, ವೀಸಾ ಇಲ್ಲದಿರುವವರ, ಅವಧಿ ಮುಗಿದಿರುವವರ ಅಕ್ರಮವಾಗಿ ನುಸುಳಿರುವವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರಿಗೆ ಸೂಚಿಸಲಾಗಿದೆ.
ರಾಜ್ಯದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ, ವಕ್ಫ್ ಆಸ್ತಿ ಕಬಳಿಕೆ ವರದಿ ಅನುಷ್ಠಾನಗೊಳಿಸದಿರುವ ವಿಚಾರದಲ್ಲಿ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಆರೋಪದ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಅವರಲ್ಲಿ ಮಾತನಾಡುತ್ತೇನೆ. ಅವರ ಅತೃಪ್ತಿ ಬಗ್ಗೆ ನನಗೇನು ಗೊತ್ತಿಲ್ಲ. ನಾವು ಯಾವ ಧರ್ಮದವರನ್ನು ಕಡೆಗಣಿಸುತ್ತಿಲ್ಲ. ಆದರೆ ಸಮಾಜದ್ರೋಹಿ, ಕಾನೂನು ಬಾಹಿರ ವಿಚಾರದಲ್ಲಿ ತೊಡಗಿರುವವರನ್ನು ಬಿಡುವುದಿಲ್ಲ ಎಂದು ಹೇಳಿದರು.
PublicNext
27/06/2022 10:30 pm