ಉಳ್ಳಾಲ: ನಿರುದ್ಯೋಗ ಸಮಸ್ಯೆ ನಿವಾರಣೆಗೆಂದು ತಂದ ಅಗ್ನಿಪಥ ಯೋಜನೆ ಯುವಕರನ್ನು ಅಗ್ನಿಕುಂಡಕ್ಕೆ ತಳ್ಳುವ ಯೋಜನೆ ಎಂದು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ ಕುರ್ನಾಡು ಲೇವಡಿ ಮಾಡಿದ್ದಾರೆ.
ಕೇಂದ್ರ ಬಿಜೆಪಿ ಸರಕಾರವು ರಾಜಕೀಯ ಪ್ರೇರಿತ ಸೇಡು ಮತ್ತು ದ್ವೇಷದಿಂದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು,ಕೇಂದ್ರದಿಂದ ಅಗ್ನಿಪಥ, ರಾಜ್ಯ ಬಿಜೆಪಿ ಸರಕಾರ ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ಪ್ರವಾದಿಯವರನ್ನು ನಿಂದಿಸಿದ ಬಿಜೆಪಿ ರಾಷ್ಟ್ರ ನಾಯಕರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಮುಡಿಪು ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಶುಕ್ರವಾರ ಮುಡಿಪು ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಹುಲ್ ಗಾಂಧಿ ಪಪ್ಪು, ಪಪ್ಪು ಎಂದು ಹೇಳುತ್ತಿದ್ದವರು ಅವರು ಪ್ರಬುದ್ಧರಾಗುತ್ತಿದ್ದಂತೆಯೇ ಇಡಿ ಮೂಲಕ ವಿಚಾರಣೆ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೂ ಕಾಟ ಕೊಡುತ್ತಿದ್ದಾರೆ. ಕೇಂದ್ರ ಬಿಜೆಪಿ ಸರಕಾರದ ಈ ಜನವಿರೋಧಿ ಧೋರಣೆಯನ್ನ ಕೇವಲ ಕಾಂಗ್ರೆಸ್ ಪಕ್ಷ ಮಾತ್ರವಲ್ಲದೆ ಜನಸಾಮಾನ್ಯರೂ ಒಕ್ಕೊರಲಿನಿಂದ ಬೀದಿಗಿಳಿದು ಪ್ರತಿಭಟಿಸಬೇಕೆಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಇರಾ ಗ್ರಾ.ಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ ಮೊದಲಾದವರು ಪ್ರತಿಭಟನೆಯಲ್ಲಿದ್ದರು.
Kshetra Samachara
24/06/2022 03:48 pm