ಉಡುಪಿ: ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಆರೋಪಿಸಿ ಸಮಾಜ ಸುಧಾರಕರಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತು ವಿವರಿಸುವ ಪಾಠವನ್ನು ಶಾಲಾ ಪಠ್ಯದಿಂದ ಕೈಬಿಟ್ಟಿರುವುದು ಖಂಡನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ನಗರಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್ ಹೇಳಿದ್ದಾರೆ.
ಕಳೆದ ಗಣರಾಜ್ಯೋತ್ಸವ ಸಂದರ್ಭ ದೆಹಲಿಯಲ್ಲಿ ನಡೆದ ಪರೇಡ್‌ನಿಂದಲೂ ಕೇರಳ ಸರಕಾರ ಪ್ರಾಯೋಜಿಸಿದ್ದ ನಾರಾಯಣ ಗುರುಗಳ ಟ್ಯಾಬ್ಲೊವನ್ನು ವಿನಾ ಕಾರಣ ರದ್ಧುಗೊಳಿದ್ದೂ ಸೇರಿದಂತೆ ಬಿಜೆಪಿ ಸರಕಾರಗಳು ನಿರಂತರವಾಗಿ ನಾರಾಯಣ ಗುರುಗಳು ಹಾಗೂ ಹಿಂದುಳಿದ ಸಮುದಾಯಗಳನ್ನು ಅವಮಾನಿಸುತ್ತಲೇ ಬಂದಿವೆ. ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ಸಮುದಾಯಗಳ ಮತಗಳಿಂದ ಗೆದ್ದು ಬಂದ ಬಿಜೆಪಿ ಶಾಸಕರುಗಳು, ಮಂತ್ರಿಗಳು ಇದ್ದೂ, ಹಿಂದುಳಿದ ವರ್ಗದ ಜನರಿಗೆ ಘನತೆಯ ಬದುಕು ಒದಗಿಸಿಕೊಟ್ಟ ಮಾನವತಾವಾದಿ ಸಮಾಜ ಸುಧಾರಕರಿಗೆ ಬಿಜೆಪಿ ಈ ರೀತಿ ನಿರಂತರ ಅವಮಾನ ಮಾಡುತ್ತಿರುವುದು ಖಂಡನೀಯ.
ಚುನಾವಣಾ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಪಡೆಯಲು ನಾನಾ ರೀತಿಯ ನಾಟಕೀಯ ಹೇಳಿಕೆಗಳು, 'ನಾವು ನಿಮ್ಮೊಂದಿಗಿದ್ದೇವೆ' ಎಂಬ ಆಶ್ವಾಸನೆ ನೀಡಿ ಗೆದ್ದು ಬಂದ ಪ್ರತಿನಿಧಿಗಳು ಈಗ ಮೌನ ವಹಿಸಿರುವುದೇಕೆ ಎಂದು ಕಾಂಚನ್ ಪ್ರಶ್ನಿಸಿದ್ದಾರೆ. ಈ ಬೆಳವಣಿಗೆಗಳು ಹಿಂದುಳಿದ ವರ್ಗಗಳ ಜನರಿಗೆ ನೋವನ್ನುಂಟುಮಾಡಿದ್ದು, ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆಗೆ ಕಾರಣವಾಗಿದೆ ಎಂದವರು ತಿಳಿಸಿದ್ದಾರೆ.
Kshetra Samachara
19/05/2022 05:26 pm