ಪುತ್ತೂರು: ಪುತ್ತೂರು ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪುತ್ತೂರು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಸಾರ್ವಜನಿಕರ ಮುಂದೆ ಬರೀ ನಾಟಕವಾಡುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಅಮಳ ರಾಮಚಂದ್ರ ಮಾತನಾಡಿ, ಇತ್ತೀಚೆಗೆ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಸಾರ್ವಜನಿಕರ ಮುಂದೆಯೇ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಾಸಕರು ಎಚ್ಚರಿಸಿದ್ದರು. ಆದರೆ, ಕಳೆದ 4 ವರ್ಷಗಳಿಂದ ಪುತ್ತೂರಿನ ಎಲ್ಲಾ ಸರಕಾರಿ ಕಚೇರಿಗಳ ಬಾಗಿಲುಗಳು ಹಣಕ್ಕಾಗಿ ಬಾಯಿ ಬಾಯಿ ಬಿಡುತ್ತಿದೆ.
ಅಕ್ರಮ- ಸಕ್ರಮದ ಒಂದೇ ಒಂದು ಫೈಲ್ ಕೂಡ ಕ್ಲಿಯರ್ ಆಗಿಲ್ಲ. ಫ್ಲಾಟಿಂಗ್ ಮಾಡದೆ ಅಕ್ರಮ-ಸಕ್ರಮದಲ್ಲಿ ದೊರೆತ ಜಮೀನನ್ನು ತನ್ನ ಹೆಸರಿಗೆ ಮಾಡಲಾಗದಂತಹ ಸ್ಥಿತಿಯಿದೆ. ಆದರೆ, ಕಳೆದ 4 ವರ್ಷದಿಂದ ಎಲ್ಲವನ್ನೂ ತಿಳಿದು ಸುಮ್ಮನಿದ್ದ ಶಾಸಕರು ಇದೀಗ ತಮ್ಮ ಶಾಸಕತ್ವದ ಅವಧಿ ಮುಗಿಯುತ್ತಾ ಬರುತ್ತಿರುವ ಸಮಯದಲ್ಲಿ ಅಧಿಕಾರಿಗಳಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಸರ್ವೆ ಇಲಾಖೆಯ ಡಿಡಿಎಲ್ಆರ್ ಲಂಚ ಪಡೆಯದೆ ಒಂದೇ ಒಂದು ಕೆಲಸವನ್ನೂ ಮಾಡುತ್ತಿಲ್ಲ.
ಗ್ರಾಮ ಪಂಚಾಯತ್ ನಿಂದ ಹಿಡಿದು ತಹಶೀಲ್ದಾರ್ ಕಚೇರಿವರೆಗೆ ಅಧಿಕಾರಿಗಳು ಲಂಚ ಪಡೆಯುತ್ತಿದ್ದು, ಈ ಲಂಚದ ಒಂದು ಭಾಗವನ್ನು ಶಾಸಕರು, ಬಿಜೆಪಿ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಗೂ ಮುಟ್ಟಿಸಲಾಗುತ್ತಿದೆ ಎಂದು ಅಮಳ ರಾಮಚಂದ್ರ ಆರೋಪಿಸಿದರು.
Kshetra Samachara
02/05/2022 02:27 pm