ಕುಂದಾಪುರ: ಬಿಜೆಪಿ ಸರಕಾರ ಕಮಿಷನ್ ಸರಕಾರವಾಗಿದೆ. ಇಂತಹ ಕೆಲಸಕ್ಕೆ ಇಂತಿಷ್ಟು ಎಂಬ ದರಪಟ್ಟಿ ನಿಗದಿಪಡಿಸಿ ಕೆಲಸ ಮಾಡುತ್ತಿದ್ದಾರೆ. ಈ ಸರಕಾರದಿಂದ ಒಳಿತನ್ನು ಬಯಸಲು ಆಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಲೇವಡಿ ಮಾಡಿದ್ದಾರೆ.
ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಆಳುತ್ತಿರುವ ಬಿಜೆಪಿ ಸರಕಾರದ ಒಂದೊಂದೇ ಹಗರಣಗಳು ಹೊರಬರುತ್ತಿವೆ. ರಾಜ್ಯ ಬಿಜೆಪಿ ಸರಕಾರ 40% ಕಮಿಷನ್ ಪಡೆಯುವ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಯವರಿಗೆ ಪತ್ರ ಬರೆದು ವರ್ಷ ಕಳೆದಿದೆ.ಆದರೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದು ಮೌನಂ ಸಮ್ಮತಿ ಲಕ್ಷಣಂ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹಿಂದಿನ ಪ್ರಧಾನಿಯವರಿಗೆ ಮೌನ ಮುರಿಯಲ್ಲ ಎಂದು ಜನರು ಹೇಳುತ್ತಿದ್ದರು. ಆದರೆ ಪ್ರತಿಯೊಂದಕ್ಕೂ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುತ್ತಿರುವ ಈಗಿನ ಪ್ರಧಾನಿ ಕಮಿಷನ್ ವಿಚಾರದಲ್ಲಿ ಮೌನ ವಹಿಸಿರುವುದು ಪರೋಕ್ಷವಾಗಿ ಭ್ರಷ್ಟಾಚಾರಕ್ಕೆ ಒಪ್ಪಿದಂತಾಗುತ್ತದೆ ಎಂದು ಆರೋಪಿಸಿದರು.
ಪ್ರಧಾನಿಯವರು ಕರ್ನಾಟಕಕ್ಕೆ ಬಂದಾಗ ಅಂದಿನ ಸಿಎಂ ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್ ಸರಕಾರ ಎಂದು ಲೇವಡಿ ಮಾಡಿದ್ದರು. ಆದರೆ ಈಗ ಜನರು, ಗುತ್ತಿಗೆದಾರರು ಸರಕಾರದ ಬಗ್ಗೆ ಲೇವಡಿ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಕಮಿಷನ್ ಆರೋಪ ಮಾಡಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸರಕಾರದ ಸಚಿವರು, ಅಧಿಕಾರಿಗಳ ಮೇಲೆ ಕಮಿಷನ್ ಆರೋಪ ಮಾಡಿದ್ದಾರೆ. ಮಠಗಳಿಗೆ ಹಣ ನೀಡುವ ಬಗ್ಗೆ ನಮ್ಮ ತಕರಾರಿಲ್ಲ. ಆದರೆ ಅದಕ್ಕೂ ಲಂಚ ನೀಡಬೇಕಾಗುತ್ತದೆ ಎಂದು ಮಠಾಧೀಶರೇ ಆರೋಪಿಸಿದ್ದಾರೆ. ಈ ಸರಕಾರದಿಂದ ಏನು ನಿರೀಕ್ಷೆ ಮಾಡಲು ಸಾಧ್ಯವಿದೆ ಎಂದು ಮಂಜುನಾಥ್ ಭಂಡಾರಿ ಕಿಡಿಕಾರಿದರು.
PublicNext
25/04/2022 10:30 am