ಬಂಟ್ವಾಳ: ಕಳೆದ ನಾಲ್ಕು ದಿನಗಳಿಂದ ನೀರು ಬಂದಿಲ್ಲ ಎಂದು ಆರೋಪಿಸಿ ಸಜಿಪಮುನ್ನೂರು ಗ್ರಾಪಂ ಕಚೇರಿಗೆ ಬಂದ ಶಾಂತಿನಗರ, ಮಿತ್ತಕಟ್ಟ ಭಾಗದ ಮಹಿಳೆಯರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪಿಡಿಒ ಆಯಿಷಾ ಬಾನು, ಮಹಿಳೆಯರ ಅಹವಾಲನ್ನು ಆಲಿಸಿ, ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು. ಸ್ಥಳೀಯ ಮಹಿಳೆ ಕಾವ್ಯ ಮಾತನಾಡಿ, ಹಲವು ವರ್ಷಗಳಿಂದ ನಾವು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಈ ತನಕ ನಮ್ಮ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಸರಕಾರಿ ಬಾವಿಯೂ ಇಲ್ಲದೆ ನೀರಿಗಾಗಿ ಪರದಾಡುತ್ತಿದ್ದೇವೆ. ಕೆಲವೊಮ್ಮೆ ನೀರು ಪೂರೈಕೆಯಾದರೂ ಅದು ಕೆಂಪು ಬಣ್ಣದಿಂದ ಕೂಡಿರುತ್ತದೆ. ನದಿಯಿಂದ ತೆಗೆದು ನೇರವಾಗಿ ಮನೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ ಎಂದು ದೂರಿದರು.
ಪಿಡಿಒ ಆಯಿಷಾ ಬಾನು ಪ್ರತಿಭಟನಾಕಾರರ ಮನವೊಲಿಸಿ, ಪ್ರಸ್ತುತ ತಾತ್ಕಾಲಿಕ ಪರಿಹಾರವಾಗಿ ಸಂಜೆಯೊಳಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಬದಲಿ ಕ್ರಿಯಾಯೋಜನೆ ಮಾಡಲಾಗಿದ್ದು, 15ನೇ ಹಣಕಾಸಿನ ಯೋಜನೆಯಡಿ 3 ಲಕ್ಷ ರೂ. ಬಾವಿ ನಿರ್ಮಾಣಕ್ಕಾಗಿ ಇಡಲಾಗಿದೆ. ಜಲಜೀವನ್ ಮಿಷನ್ ಮೂಲಕ ಸರ್ವೇ ನಡೆಸಿ ಅದು ಕೂಡ ಜಾರಿಯಾದರೆ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂದರು. ಗ್ರಾಪಂ ಅಧ್ಯಕ್ಷೆ ಫೌಸ್ಟಿನ್ ಡಿಸೋಜ, ಸದಸ್ಯರಾದ ನವೀನ್, ಪ್ರವೀಣ್ ಗಟ್ಟಿ, ಸುಮತಿ, ಅಬ್ದುಲ್ ಸಮೀರ್ ಸ್ಥಳದಲ್ಲಿದ್ದರು.
Kshetra Samachara
01/02/2022 09:32 pm