ಮಂಗಳೂರು: ದೇವಸ್ಥಾನಗಳಿಗೆ ಸ್ವಾಯತ್ತತೆ ಕೊಡುವ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿಯವರ ನಿರ್ಧಾರ ಸ್ವಾಗತಾರ್ಹ
ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದ ಹಿಂದೂಗಳದೂ ಇದೇ ಭಾವನೆ ಆಗಿದೆ. ಸರ್ಕಾರದ ಹಸ್ತಕ್ಷೇಪ ಇರದೆ, ಅಲ್ಲಿನ ಅಭಿವೃದ್ಧಿ ಅಲ್ಲೇ ಆಗಬೇಕಾಗಿದೆ. ಆದರೆ, ಕಾಂಗ್ರೆಸ್ ಇಲ್ಲಿಯೂ ಎಂದಿನಂತೆ ಸ್ವಾರ್ಥ ರಾಜಕಾರಣ ಮಾಡ್ತಿದ್ದು, ಹಿಂದೂ ವಿರೋಧಿ ನೀತಿಯನ್ನೇ ಮುಂದುವರಿಸಿದೆ. ಮತಾಂತರ ಕಾಯ್ದೆ, ಸಿಎಎ ಕಾಯ್ದೆ, ಈಗ ದೇವಸ್ಥಾನ ಸ್ವಾಯತ್ತೆಗೂ ಕಾಂಗ್ರೆಸ್ ವಿರೋಧಿಸುತ್ತಿದ್ದು, ಅವನತಿಯತ್ತ ಸಾಗುತ್ತಿದೆ.
ಕೇವಲ ಅಲ್ಪಸಂಖ್ಯಾತರ ಮತಕ್ಕಾಗಿ ಇಡೀ ಹಿಂದೂ ಸಮಾಜಕ್ಕೇ ಕಾಂಗ್ರೆಸ್ ದ್ರೋಹ ಬಗೆಯುತ್ತಿದೆ. ಕಾಂಗ್ರೆಸ್ ಗೆ ಹಿಂದೂ ಧರ್ಮ, ಹಿಂದೂಗಳ ಮೇಲೆ ನಂಬಿಕೆಯೇ ಇಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿರ್ಧಾರ ಸರಿಯಿದೆ. ಎಲ್ಲ ಮಠಾಧಿಪತಿಗಳು, ದೇವಸ್ಥಾನದವರು ಸ್ವಾಗತಿಸಿದ್ದಾರೆ.
ಸಿದ್ದರಾಮಯ್ಯ ಎಲ್ಲದಕ್ಕೂ ಬರೀ ಟೀಕೆ ಮಾಡ್ತಿದ್ದಾರೆ. ಆದ್ರೆ, ಟಿಪ್ಪು ಜಯಂತಿ ಯಾರ ಓಲೈಕೆಗೆ ಮಾಡಿದ್ದು? ಶಾದಿ ಭಾಗ್ಯ ಯೋಜನೆಯಲ್ಲೂ ಅಲ್ಪಸಂಖ್ಯಾತರನ್ನು ಹುಡುಕಿ ಮತೀಯ ಭಾವನೆ ಮೂಡಿಸಿದ್ರಿ, ಅಹಿಂದ ಚಳವಳಿ ಮಾಡಿದ್ರಿ. ಆದ್ರೆ, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ಪುಟ್ಟಪ್ಪ ಸತ್ತಾಗ ಏನು ಮಾಡಿದ್ರಿ? ಎಂದು ಪ್ರಶ್ನಿಸಿದರು.
PublicNext
03/01/2022 02:18 pm