ವರದಿ: ರಹೀಂ ಉಜಿರೆ
ಉಡುಪಿ: ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆಗೆ ಕ್ರೈಸ್ತ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಅಧಿವೇಶನದ ಹೊರಗೆ ಪ್ರತಿಭಟನೆಗೆ ಮುಂದಾಗಿರುವ ಭಾರತೀಯ ಕ್ರೈಸ್ತ ಒಕ್ಕೂಟ, ಅಧಿವೇಶನದಲ್ಲಿ ಕಾಯಿದೆ ತರಲು ಮುಂದಾದರೆ ತೀವ್ರ ಹೋರಾಟದ ಎಚ್ಚರಿಕೆ ನೀಡಿದೆ.
ಈ ಸಂಬಂಧ ಉಡುಪಿಯಲ್ಲಿ 'ಪಬ್ಲಿಕ್ ನೆಕ್ಸ್ಟ್' ಜೊತೆ ಮಾತನಾಡಿದ ಸಂಘದ ಮುಖಂಡರು, ರಾಜ್ಯದಲ್ಲಿ ಬಲವಂತದ ಮತಾಂತರ ಆಗಿದೆ ಎಂಬುದಕ್ಕೆ ಒಂದೇ ಒಂದು ಸಾಕ್ಷಿ, ಪುರಾವೆ ಸಿಕ್ಕಿಲ್ಲ. ತರಾತುರಿಯಲ್ಲಿ ಕಾಯ್ದೆ ಜಾರಿಗೆ ತರುವ ಹಿಂದೆ ಷಡ್ಯಂತ್ರ ಇದೆ. ಕ್ರೈಸ್ತ ಸಮುದಾಯವನ್ನು ದಮನಿಸಲು ರಾಜಕೀಯ ಪ್ರೇರಿತವಾಗಿ ಈ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಈ ತನಕ ಆಗಿರುವ ಮತಾಂತರಗಳು ಸ್ವಇಚ್ಛೆಯಿಂದ ಹೊರತು ಬಲವಂತದ ಮತಾಂತರ ಅಲ್ಲ. ಸಂವಿಧಾನದ ಆಶಯದಂತೆ ಇಲ್ಲಿ ಸರ್ವಧರ್ಮೀಯರೂ ಸೌಹಾರ್ದತೆಯಿಂದ ಬದುಕು ನಡೆಸುವಂತಾಗಲು ಸರಕಾರ ವ್ಯವಸ್ಥೆ ಮಾಡಬೇಕೇ ವಿನಃ ಇನ್ನೊಂದು ಕಾಯಿದೆಯ ಅಗತ್ಯ ಇಲ್ಲ ಎಂದು ಮುಖಂಡರು ಪ್ರತಿಪಾದಿಸಿದ್ದಾರೆ.
ಭಾರತೀಯ ಕ್ರೈಸ್ತ ಒಕ್ಕೂಟ ಬೆಳಗಾವಿ ಅಧಿವೇಶನ ಸಂದರ್ಭ ಸಾಂಕೇತಿಕವಾಗಿ ಒಂದು ದಿನದ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ರಾಜ್ಯದ ಪ್ರತಿ ಜಿಲ್ಲೆ ಸದಸ್ಯರು, ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಕೂಡಲೇ ಈ ಮಸೂದೆ ಕೈ ಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಎಚ್ಚರಿಕೆ ನೀಡಿದೆ.
Kshetra Samachara
13/12/2021 04:04 pm