ಮಂಗಳೂರು: ದ.ಕ. ಸ್ಥಳೀಯ ಪ್ರಾಧಿಕಾರದ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ದ್ವೈವಾರ್ಷಿಕ ಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಂಗಳೂರು, ಬಂಟ್ವಾಳ, ಪುತ್ತೂರಿನ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಗತ್ಯ ಚುನಾವಣಾ ಸಾಮಗ್ರಿಗಳೊಂದಿಗೆ ಇಂದು ಚುನಾವಣೆಗೆ ನಿಯೋಜಿಸಲಾಗಿರುವ ಸಿಬ್ಬಂದಿ ನಿಗದಿ ಪಡಿಸಿದ ಮತಗಟ್ಟೆಗೆ ತೆರಳುವ ಮೂಲಕ ಮಂಗಳೂರು ತಾಲೂಕಿನಲ್ಲಿ ಮಸ್ಟರಿಂಗ್ ಕಾರ್ಯ ಅಚ್ಚುಕಟ್ಟಾಗಿ ನಡೆಯಿತು. ಪಿಆರ್ ಒ, ಪೋಲಿಂಗ್ ಅಧಿಕಾರಿಗಳು, ಗ್ರೂಪ್ ಡಿ ನೌಕರರು ಬ್ಯಾಲೆಟ್ ಬಾಕ್ಸ್, ಪೇಪರ್, ಇಂಕ್, ರಬ್ಬರ್ ಸ್ಟಾಂಪ್, ಸೀಲ್, ಟ್ಯಾಗ್ ಸಹಿತ ಅಗತ್ಯ ಪರಿಕರ ಮತಗಟ್ಟೆಗಳಿಗೆ ಕೊಂಡೊಯ್ದರು.
ದ.ಕ. ಜಿಲ್ಲೆ ಹಾಗೇ ಉಡುಪಿ ಜಿಲ್ಲೆಯಲ್ಲಿ ಒಟ್ಟು 389 ಮತಗಟ್ಟೆಗಳಿವೆ. ಒಟ್ಟು 6040 ಮತದಾರರಿದ್ದು, ಅದರಲ್ಲಿ 2,916 ಪುರುಷ ಮತದಾರರು ಹಾಗೂ 3124 ಮಹಿಳಾ ಮತದಾರರಿದ್ದಾರೆ. ನಾಳೆ ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಬೆಳಗ್ಗೆ 8ರಿಂದ 4 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಎಣಿಕೆ ಪ್ರಕ್ರಿಯೆ ನಗರದ ರೊಸಾರಿಯೊ ಪಿಯು ಕಾಲೇಜಿನಲ್ಲಿ ನಡೆಯಲಿದೆ.
Kshetra Samachara
09/12/2021 10:01 pm