ಮಂಗಳೂರು: ಬಿಜೆಪಿ ಸರಕಾರ ತೈಲ ಬೆಲೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ, ಜನಾಕ್ರೋಶದ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಸರಕಾರಕ್ಕೆ ತೈಲ ಬೆಲೆಯನ್ನು 70 ರೂ.ಗೆ ತರಲು 70 ವರ್ಷ ಬೇಕಾಯಿತು. ಆದರೆ ಬಿಜೆಪಿಯವರು 7 ವರ್ಷದಲ್ಲಿ 110 ರೂ. ಗೆ ಏರಿಸಿದರು ಎಂದು ಶಾಸಕ ಖಾದರ್ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಮಾತನಾಡಿದ ಅವರು, ತೈಲ ಬೆಲೆ ಇಳಿಕೆ ನಮ್ಮ ಕೈಯಲ್ಲಿ ಇಲ್ಲ ಎಂದ ಅರ್ಥ ಸಚಿವರು, ಚುನಾವಣೆಯಲ್ಲಿ ಸೋತ ಬಳಿಕ ಹೇಗೆ ಇಳಿಕೆ ಮಾಡಿದರು. ಇದು ಸರಕಾರದ ಸೋಲಾಗಿದ್ದು, ಜನ ಸಾಮಾನ್ಯರ ಗೆಲುವಾಗಿದೆ. ತೈಲ ಬೆಲೆ ಇಳಿಕೆ ಮಾಡಿರುವ ಇವರು ದಿನಬಳಕೆ ವಸ್ತು ಬೆಲೆ ಯಾಕೆ ಕಡಿಮೆ ಮಾಡಿಲ್ಲ. ಈ ಬಗ್ಗೆ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಕಾರ್ಪೊರೇಟ್ ಸೆಕ್ಟರ್ ಗಳ ಭಾರ ಇಳಿಸಲು ಹೋಗಿರುವ ಸರಕಾರ, ಜನಸಾಮಾನ್ಯರಿಗೆ ಹೊರೆ ಹೊರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯೋತ್ಸವ ಪ್ರಶಸ್ತಿ ವಿತರಣೆ ವಿಚಾರದಲ್ಲಿ ದ.ಕ ಜಿಲ್ಲೆಯ ಸಂಸ್ಕೃತಿ ಪರಂಪರೆಯ ಯಕ್ಷಗಾನ, ಭರತನಾಟ್ಯವನ್ನು ಕಡೆಗಣಿಸಲಾಗಿದೆ. ಸಂಸ್ಕೃತಿ ಪರಂಪರೆಗಳ ಬಗ್ಗೆ ಹೇಳಿಕೆ ನೀಡಿ ಅಧಿಕಾರಕ್ಕೆ ಬಂದವರು ಈಗ ಎಲ್ಲಿದ್ದಾರೆ? ಕರಾವಳಿ ಭಾಗದವರೇ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ. ಆದರೂ ಇಲ್ಲಿನ ಸಂಸ್ಕೃತಿ, ಪರಂಪರೆ ಕಡೆಗಣನೆ ಆಗಿರೋದು ವಿಪರ್ಯಾಸ. ಇದು ಇಡೀ ಕರಾವಳಿಗೆ ಮಾಡಿರುವ ಅವಮಾನ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಯು.ಟಿ. ಖಾದರ್ ಹೇಳಿದರು.
Kshetra Samachara
06/11/2021 03:27 pm