ಮೂಡುಬಿದಿರೆ: ಧಾರ್ಮಿಕ ಕೇಂದ್ರ ತೆರವುಗೊಳಿಸುವ ವಿಚಾರದಲ್ಲಿ ಬಿಜೆಪಿಯ ನಡೆಯ ವಿರುದ್ಧ ಜನಜಾಗೃತಿಗಾಗಿ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಸೆ.25 ಸಾಯಂಕಾಲ 5.30ಕ್ಕೆ ಅಲಂಗಾರು ಮಹಾಲಿಂಗೇಶ್ವರ ದೇವಳದಿಂದ ನಿಶ್ಮಿತಾ ಸರ್ಕಲ್‌ವರೆಗೆ ಕಾಲ್ನಡಿಗೆ ಜಾಥ ನಡೆಯಲಿದೆ. ಸುಧೀರ್ ಕುಮಾರ್ ಮುರೋಳಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮಿಥುನ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಯೋದ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸುಪ್ರೀಂ ಕೋರ್ಟ್ ತೀರ್ಪು ಬಂದರೂ, ಅದು ಮೋದಿ, ಬಿಜೆಪಿ ಸಾಧನೆ ಎಂದು ಬಿಂಬಿಸಲಾಗಿತ್ತು. ಈಗ ಧಾರ್ಮಿಕ ಕೇಂದ್ರ ತೆರವು ವಿಚಾರದಲ್ಲಿ ಯಾರ ಮೇಲೆ ಹೊಣೆ ಎಂಬುದನ್ನು ಬಿಜೆಪಿ ಸ್ಪಷ್ಟನೆ ನೀಡಬೇಕು. ಒಂದು ವೇಳೆ ಕಾಂಗ್ರೆಸ್ ಅವಧಿಯಲ್ಲಿ ಇಂತಹ ಪ್ರಮಾದವಾಗಿದಲ್ಲಿ, ಬಿಜೆಪಿ ಮುಖಂಡರು, ಶಾಸಕರು ಯಾವ ರೀತಿಯಲ್ಲಿ ರಾಜಕೀಯ ಮಾಡುತ್ತಿದ್ದರು ಎಂಬುದು ಜನರು ತಿಳಿಯಬೇಕು. ಹಿಂದೂ ಧರ್ಮದ ವಿಚಾರದಲ್ಲಿ ರಾಜಕೀಯ ಮಾಡುವ ಬಿಜೆಪಿ ಸರ್ಕಾರ ಈಗ ಧಾರ್ಮಿಕ ಕೇಂದ್ರಗಳ ತೆರವು ವಿಚಾರದಲ್ಲಿ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ನುಣುಚಿಕೊಳ್ಳುವ ಯತ್ನವನ್ನು ಮಾಡುತಿದೆ ಎಂದು ಆರೋಪಿಸಿದರು.
ಬಿಜೆಪಿಯ ನೈಜ್ಯ ಧಾರ್ಮಿಕ ಅಜೆಂಡಾವನ್ನು ಬಯಲುಗೆಳೆಯಲು ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಪ್ರಚೋಧನಕಾರಿ ಭಾಷಣದಿಂದ ಕೋಮು ಗಲಬೆ ಸೃಷ್ಟಿಸಲು ಕಾರಣವಾಗುವ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆಯೂ ನಾವು ಆಗ್ರಹಿಸುತ್ತೇವೆ ಎಂದರು.
ಗೋರಕ್ಷೆಯ ವಿಚಾರದಲ್ಲಿ ಬಿಜೆಪಿಯು ಇಬ್ಬಗೆಯ ನಿಲುವನ್ನು ಹೊಂದಿದೆ. ಕರ್ನಾಟಕದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಗದ್ದಲವೆಬ್ಬಿಸುವ ಬಿಜೆಪಿ, ಕೇರಳದಲ್ಲಿ ಬೀಫ್ ರಫ್ತು ಮಾಡುವುದಾಗಿ ಅದರ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡುತ್ತದೆ. ಗೋವಾದಲ್ಲೂ ಬಿಜೆಪಿಯದ್ದು ಗೋರಕ್ಷೆಯ ವಿಚಾರದಲ್ಲಿ ಇನ್ನೊಂದು ನಿಲುವನ್ನು ಹೊಂದಿದೆ. ಕಡಬದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂಘ ಪರಿವಾರದ ಮುಖಂಡರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿಡಿದಿದ್ದಾರೆ ಎಂದು ಮಿಥುನ್ ರೈ ಹೇಳಿದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ವಕ್ತಾರ ರಾಜೇಶ್ ಕಡಲಕೆರೆ ಮಂಗಳೂರು ಎಪಿಎಂಸಿ ಸದಸ್ಯ ಚಂದ್ರಹಾಸ ಸನಿಲ್, ಪುರಸಭೆ ಸದಸ್ಯ ಸುರೇಶ್ ಕೋಟ್ಯಾನ್, ಪುರಂದರ ದೇವಾಡಿಗ, ಎಸ್‌ಸಿ,ಎಸ್‌ಟಿ ಬ್ಲಾಕ್ ಅಧ್ಯಕ್ಷ ಶಿವಾನಂದ ಪಾಂಡ್ರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
23/09/2021 03:42 pm