ಮೂಡುಬಿದಿರೆ: ತಾಲೂಕಿಗೆ ಪೂರ್ಣಾವಧಿ ಆಹಾರ ನಿರೀಕ್ಷರ ನಿರೀಕ್ಷಕರನ್ನು ನೇಮಕಗೊಳಿಸಬೇಕೆಂದು ಆಗ್ರಹಿಸಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮೂಡುಬಿದಿರೆಯಲ್ಲಿ ಕಳೆದ ಮೂರುವರೆ ವರ್ಷಗಳಿಂದ ಆಹಾರ ನಿರೀಕ್ಷಕರ ನೇಮಕಾತಿ ಆಗಿಲ್ಲ. ಈಗ ಬಿಪಿಎಲ್ ಕಾರ್ಡುದಾರರ ಹೆಸರು ರದ್ದಾಗುತ್ತಿದ್ದು, ಹೊಸ ರೇಷನ್ ಕಾರ್ಡ್ಗಳು ಸೇರ್ಪಡೆಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಜನರು ಬವಣೆ ಪಡುವಂತಾಗಿದೆ. ಕೂಡಲೇ ಆಹಾರ ನಿರೀಕ್ಷಕರನ್ನು ನೇಮಕಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್, ಜಿಲ್ಲಾ ಕಾಂಗ್ರೆಸ್‌ನ ವೈದ್ಯಕೀಯ ವಿಭಾಗದ ಅಧ್ಯಕ್ಷ ಡಾ.ಶೇಖರ್, ಪುರಸಭಾ ಸದಸ್ಯರಾದ ಇಕ್ಬಾಲ್ ಕರೀಂ, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಕೊರಗಪ್ಪ, ಪುರಂದರ ದೇವಾಡಿಗ, ಜೊಸ್ಸಿ ಮಿನೇಜಸ್, ಪುತ್ತಿಗೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯ ಮುರಳಿ, ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಮುಖಂಡರಾದ ಅರುಣ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್, ರೀಟಾ ಕುಟಿನ್ಹಾ ಮತ್ತಿತರರು ಉಪಸ್ಥಿತರಿದ್ದರು.
ತಹಸೀಲ್ದಾರ್ ಪುಟ್ಟರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Kshetra Samachara
13/09/2021 03:20 pm