ಉಡುಪಿ: ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ದಲಿತರ ಭೂಮಿ ವಾಣಿಜ್ಯ ಪರಿವರ್ತನೆಗೆ ಇರುವ ನಿಬಂಧನೆಗಳನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಜಿಲ್ಲಾ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಈಗ ಇರುವ ಕಾನೂನಿನ ಪ್ರಕಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿಯನ್ನು ಕೇವಲ ಮನೆ ನಿರ್ಮಿಸುವ ಕಾರಣಕ್ಕಾಗಿ ಕೇವಲ 10 ಸೆಂಟ್ಸ್ ಮಾತ್ರ ಪರಿವರ್ತನೆ ಮಾಡಲು ಅವಕಾಶವಿದೆ. ಇದರಿಂದ ದಲಿತರು ತಮ್ಮ ಭೂಮಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಮಾಡಲು, ವಾಣಿಜ್ಯ ಕಟ್ಟಡ ಕಟ್ಟಲು ಅವಕಾಶವಿರುವುದಿಲ್ಲ. ಈ ನಿಬಂಧನೆಯನ್ನು ರಧ್ದು ಮಾಡಿ ಇತರರಂತೆಯೇ ನಾವೂ ಕೂಡ ನಮ್ಮಲ್ಲಿರುವ ಭೂಮಿಯಲ್ಲಿ ಯಾವುದಾದರೂ ವಾಣಿಜ್ಯ ವ್ಯವಹಾರವನ್ನು ಮಾಡಿಕೊಂಡು ಸ್ವಂತ ಉದ್ಯೋಗ ರೂಪಿಸಿಕೊಳ್ಳಲು ಅವಕಾಶವಾಗುತ್ತದೆ ಎಂದು ಸಚಿವರಿಗೆ ಮನದಟ್ಟು ಮಾಡಲಾಯಿತು. ಮತ್ತು ಆದಷ್ಟು ಶೀಘ್ರ ದಲಿತರ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಪರಿವರ್ತನೆ ಮಾಡಲು ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕೆಂದು ಮನವಿ ಅರ್ಪಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ ) ಜಿಲ್ಲಾ ಸಮಿತಿಯ ನಿಯೋಗದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ ತೆಕ್ಕಟ್ಟೆ, ಮಂಜುನಾಥ್ ಬಾಳ್ಕುದ್ರು, ಶ್ರೀಧರ ಕುಂಜಿಬೆಟ್ಟು ಉಪಸ್ಥಿತರಿದ್ದರು.
Kshetra Samachara
17/08/2021 06:03 pm