ಆನೆಗುಡ್ಡೆ: ನಮ್ಮ ಸಿಎಂ, ಪಕ್ಷದ ಅಧ್ಯಕ್ಷರು ಸಮಾಜಕಲ್ಯಾಣ ಇಲಾಖೆಯಂತಹ ಮಹತ್ತರ ಜವಬ್ದಾರಿಯನ್ನು ನನಗೆ ನೀಡಿದ್ದಾರೆ.
ನನಗೆ ಕೊಟ್ಟಿರುವ ಅವಕಾಶದಂತೆ ನಾನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯ ನೀಡಲು ಶ್ರಮಿಸುತ್ತೇನೆ.
ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ಇಲಾಖೆಯು ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ಆನೆಗುಡ್ಡೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿವರೆಗೆ ಪ.ಜಾತಿಯವರಿಗೆ ಮನೆ ನಿರ್ಮಾಣಕ್ಕೆ 1.70 ಲಕ್ಷ ಮಾತ್ರ ಲಭ್ಯವಿತ್ತು.ಈ ಮೊತ್ತವನ್ನು 5 ಲಕ್ಷದವರೆಗೆ ಏರಿಸುವಂತೆ ಹಣಕಾಸು ಇಲಾಖೆಗೆ ಶಿಫಾರಸ್ಸು ಮಾಡಿದ್ದೇನೆ.
ನಮ್ಮ ಇಲಾಖೆಯೊಳಗೆ ಬರುವ ಪ.ಜಾ ಅಥವಾ ಪ.ಪಂ. ದವರು ಇರುವ ನೆಲ ಸರಕಾರಿ ಅಥವಾ ಖಾಸಗಿಯಾಗಿದ್ದರೆ ಅವರಿಗೆ ಹಕ್ಕು ಪತ್ರ ನೀಡಲು ಬೇಕಾದ ಯೋಜನೆ ರೂಪಿಸಲು ನಮ್ಮ ಇಲಾಖೆಗೆ ನಿರ್ದೇಶನ ನೀಡಿದ್ದೇನೆ.
ಅಲ್ಲದೆ ಅನಪೇಕ್ಷಿತ ಮತ್ತು ಪಾರದರ್ಶಕವಲ್ಲದ ಯೋಜನೆಗಳನ್ನು ರದ್ದುಪಡಿಸಿ, ಅದರ ಬದಲು ಬಡವರಿಗೆ ಮತ್ತು ಹಿಂದುಳಿದವರಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸುವ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಬಡವರ ಮಕ್ಕಳು ವಿದೇಶಿ ವ್ಯಾಸಂಗ ಮೆಡಿಕಲ್ ಮತ್ತು ಅವರ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಆರ್ಥಿಕ ಕೊರತೆಯಾಗದಂತೆ ವಿದ್ಯಾರ್ಥಿವೇತನ ನೀಡುವ ಯೋಜನೆ ತರುತ್ತೇವೆ.
ಮುಂದಿನ ಸೋಮವಾರದಂದು ಈ ಯೋಜನೆಗಳ ಅನುಷ್ಠಾನ ಕುರಿತು ವಿಶೇಷ ಸಭೆ ಕರೆದು ಯೋಜನೆಗಳಿಗೆ ಅಂತಿಮ ರೂಪ ನೀಡಲಾಗುವುದು.
ಬಹುತೇಕ ಹಿಂದಿನ ಸರಕಾರ ಒಂದು ವರ್ಗದವರ ಮೇಲಿನ ಪ್ರಕರಣ ಕೈಬಿಟ್ಟು ನಮ್ಮವರ ಮೇಲೆ ಸುಳ್ಳು ಕೇಸು ಹಾಕಿದೆ.ಹಾಗಾಗಿ ಈ ಕುರಿತು ಹಿಂದೂ ಸಂಘಟನೆಗಳು ನೀಡಿದ ಮನವಿಯನ್ನು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರಿಗೆ ನೀಡಿದ್ದೇನೆ.
ಸಂಘಟನೆಯ ಮೇಲಿರುವ ಸುಳ್ಳು ಪ್ರಕರಣಗಳನ್ನು ಕೈ ಬಿಡುವಂತೆ ಅವರಲ್ಲಿ ಮನವಿ ಮಾಡಿದ್ದೇನೆ. ರಾಜ್ಯದಲ್ಲಿರುವ ಎಲ್ಲಾ ಪ್ರಕರಣಗಳ ಮಾಹಿತಿ ಪಡೆದು, ಸುಳ್ಳು ಕೇಸುಗಳನ್ನು ವಾಪಾಸ್ ತೆಗೆಯುವ ಭರವಸೆಯನ್ನು ಗೃಹಮಂತ್ರಿ ನೀಡಿದ್ದಾರೆ ಎಂದು ಕೋಟ ಹೇಳಿದ್ದಾರೆ.
Kshetra Samachara
10/08/2021 12:29 pm