ಉಡುಪಿ: ಸಚಿವ ಸಂಪುಟ ಪುನರ್ರಚನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವಾರ್ ಪ್ರಾರಂಭವಾಗಿದೆ. ಸಚಿವರಾಗುವ ಸಾಕಷ್ಟು ನಿರೀಕ್ಷೆಗಳಿಂದ ಶಾಸಕರ ಬೆಂಬಲಿಗರು ಸದ್ಯ ಸಾಮಾಜಿಕ ಜಾಲತಾಣವನ್ನು ರಣಾಂಗಣವಾಗಿಸಿದ್ದಾರೆ. ಈಗಾಗಲೇ ಕರಾವಳಿಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮಾನಹಾನಿ ಮೂಲಕ ಸಚಿವ ಸಂಪುಟ ವಿಸ್ತರಣೆ ಬೇಗುದಿ ಹೊರ ಬಿದ್ದಿದೆ.
ಹೌದು, ಯಾವಾಗ ರಾಜ್ಯ ಸರಕಾರದ ಸಚಿವ ಸಂಪುಟ ಪುನರ್ರಚನೆ ಸುದ್ದಿ ಹೊರ ಬಿದ್ದಿತ್ತೋ, ಅಂದಿನಿಂದ ಕರಾವಳಿಯಲ್ಲಿ ಶಾಸಕರ ಬೆಂಬಲಿಗರ ನಿರೀಕ್ಷೆ ಗರಿಗೆದರಿತ್ತು. ಆದರೆ, ಸುಳ್ಯ ಶಾಸಕ ಅಂಗಾರ ಅವರಿಗೆ ಮಾತ್ರ ನೂತನ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿರುವುದು ಬಹುತೇಕ ಶಾಸಕರ ಬೆಂಬಲಿಗರಿಗೆ ಬೇಸರ ತಂದಿದೆ. ಸದ್ಯ ಈ ಬೇಸರಕ್ಕೆ ಗುರಿಯಾದವರು ಮಾತ್ರ ಸಿಂಪಲ್ ಶ್ರೀನಿವಾಸ ಎಂದೇ ಖ್ಯಾತರಾದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ. ಯಾವುದೇ ಲಾಬಿಗೆ ಇಳಿಯದೆ ಯಾವುದೇ ನಿರೀಕ್ಷೆ ಇಲ್ಲದೆ ಸಚಿವರಾದ ಕೋಟ, ಪ್ರಾರಂಭದ ದಿನಗಳಿಂದಲೇ ಕರಾವಳಿ ಶಾಸಕರ ಕೋಪಕ್ಕೆ ತುತ್ತಾಗಿದ್ದರು. ಸದ್ಯ ಅದರ ಮುಂದುವರಿದ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಎದುರಿಸುತ್ತಿದ್ದಾರೆ.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಸಿಎಂ ಯಡಿಯೂರಪ್ಪ ಅವರ ಎರಡು ದಿನಗಳ ಕರಾವಳಿ ಭೇಟಿ ಸಂದರ್ಭ ಬಿಲ್ಲವ, ಈಡಿಗ, ನಾಮಧಾರಿ ಇನ್ನಿತರ ಉಪಪಂಗಡಗಳ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವಂತೆ ಕೇಳಿರುವುದೇ ಸದ್ಯ ದೊಡ್ಡ ಅಪರಾಧವಾಗಿದೆ. ಸಾಮಾಜಿಕ ಸುದ್ದಿ ಜಾಲದಲ್ಲಿ ಪ್ರಕಟವಾದ ಈ ಸುದ್ದಿಗೆ, ಕೋಟ ಅವರನ್ನು ಗುರಿಯಾಗಿಸಿ ಅನಿಲ್ ಶೆಟ್ಟಿ ಪೆರ್ಡೂರು ಎಂಬಾತ ಅವಾಚ್ಯವಾಗಿ ನಿಂದಿಸಿ ಪೋಸ್ಟ್ ಹಾಕಿರುವುದು ಕರಾವಳಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಈಗಾಗಲೇ ಕರಾವಳಿಯ ಅವಳಿ ಜಿಲ್ಲೆಗಳ ಬಹುತೇಕ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣವೂ ದಾಖಲಾಗಿದೆ. ಅಲ್ಲದೆ, ಸಾರ್ವಜನಿಕವಾಗಿ ಕ್ಷಮೆ ಕೇಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಬಿಲ್ಲವ ಸಂಘಟನೆಗಳು ಮತ್ತು ಕೋಟ ಅವರ ಅಭಿಮಾನಿಗಳು ಕೆಂಡಕಾರಿದ್ದಾರೆ.
ಒಟ್ಟಾರೆಯಾಗಿ ಸಚಿವರೋರ್ವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿರುವುದರ ಕುರಿತು ಕರಾವಳಿಯಾದ್ಯಂತ ವಿರೋಧ ವ್ಯಕ್ತವಾಗಿದೆ. ಮುಂದೆ ಈ ವಿರೋಧ ಯಾವ ರೂಪ ತಾಳಲಿದೆಯೋ ಕಾದು ನೋಡಬೇಕಾಗಿದೆ.
Kshetra Samachara
22/01/2021 05:30 pm