ಮಂಗಳೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಕೆಲಸ ಮಾಡಿರುವ ವೈದ್ಯರಿಗೆ ವಿಶೇಷ ಭತ್ತೆಯನ್ನು ಸರಕಾರ ಮಂಜೂರು ಮಾಡಿದೆ. ಆದರೆ, ಅವರೊಂದಿಗೆ ಕೆಲಸ ಮಾಡಿರುವ ನರ್ಸಿಂಗ್ ಸ್ಟಾಫ್ ಸಹಿತ ಇತರ ಯಾವುದೇ ಆರೋಗ್ಯ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ. ಇಂತಹ ತಾರತಮ್ಯ ಬೇಡ ಎಂದು ಆರೋಗ್ಯ ಇಲಾಖೆಯ ನೌಕರರ ಸಂಘದ ಅಧ್ಯಕ್ಷ ಎ.ಪುಟ್ಟಸ್ವಾಮಿ ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಒಂದೇ ಸೂರಿನ ಅಡಿಯಲ್ಲಿ ಕೆಲಸ ಮಾಡುತ್ತದೆ. ವೈದ್ಯಕೀಯ ಶಿಕ್ಷಣ ಇಲಾಖೆಗೆ ಪ್ರತ್ಯೇಕವಾದ ವೃಂದ ಹಾಗೂ ನೇಮಕಾತಿ ಇಲ್ಲ. ಹಾಗಾಗಿ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಬೇರ್ಪಟ್ಟಿವೆ. ಇದರಿಂದ ಆರೋಗ್ಯ ಇಲಾಖೆ ಗ್ರಾಮೀಣ ಮಟ್ಟಕ್ಕೆ ಸೀಮಿತವಾದ ಇಲಾಖೆಯಾಗುತ್ತದೆ. ಇದರಿಂದ ನೌಕರರ ಪದೋನ್ನತಿ, ವರ್ಗಾವಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಸರಕಾರ ಎರಡೂ ಇಲಾಖೆಯನ್ನು ವಿಲೀನಗೊಳಿಸಲಿ ಎಂದರು.
1985 ರಿಂದ ಇಲ್ಲಿವರೆಗೆ ಆರೋಗ್ಯ ಇಲಾಖೆಯ ವೃಂದ ಹಾಗೂ ನೇಮಕಾತಿ ಪರಿಷ್ಕರಣೆ ಆಗಿಲ್ಲ. ಆದ್ದರಿಂದ ಕಾಲಕಾಲಕ್ಕೆ ಇದು ಪರಿಷ್ಕರಣೆಯಾಗಲಿ. ಎಲ್ಲ ವೃಂದದ ಖಾಲಿಯಿರುವ ಹುದ್ದೆಗಳನ್ನು ಸರಕಾರ ಶೀಘ್ರ ಭರ್ತಿ ಮಾಡಲಿ ಎಂದು ಎ.ಪುಟ್ಟಸ್ವಾಮಿ ಹೇಳಿದರು.
Kshetra Samachara
15/01/2021 10:40 pm