ಮೂಡುಬಿದಿರೆ: ಇಲ್ಲಿನ ಕಡಲಕೆರೆ ನಿಸರ್ಗಧಾಮದಲ್ಲಿ ಫೆ.21ರಂದು ನಡೆಯಲಿರುವ ಕೋಟಿ-ಚೆನ್ನಯ ಜೋಡುಕರೆ ಕಂಬಳವನ್ನು ಒಂದೇ ದಿನ ನಡೆಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸಹಿತ ಜನಪ್ರತಿನಿಧಿಗಳು ಸೇರಿ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸುವುದಾಗಿ ಮೂಡುಬಿದಿರೆ ಕಂಬಳ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಶನಿವಾರ ಒಂಟಿಕಟ್ಟೆಯ ಸೃಷ್ಟಿ ಗಾರ್ಡನ್‍ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ಮೂಡುಬಿದಿರೆ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿ, ಕೋವಿಡ್ ನಿಯಮ ಪಾಲಿಸಿ, ಕಂಬಳ ಶಿಸ್ತುಬದ್ಧವಾಗಿ ನಡೆಯಲು ಸ್ವಯಂಸೇವಕರ, ಕಂಬಳ ಅಭಿಮಾನಿಗಳ ಸಹಕಾರ ಅತ್ಯಗತ್ಯ. ಕೋಣಗಳ ಫಿಟ್ನೆಸ್ ಪ್ರಮಾಣ ಪತ್ರ ಹೊಂದಿರಬೇಕು. ಮೂಡುಬಿದಿರೆ ಕಂಬಳಕ್ಕೆ ಮೊದಲು ನಡೆಯುವ ಕಂಬಳಗಳಲ್ಲಿ ಉತ್ತಮ ಸಾಧನೆ ಮಾಡಿ ಆಯ್ದ ಕೋಣಗಳನ್ನು ಸೇರಿಸಿ ಕಂಬಳ ಮಾಡುವ ಅವಕಾಶವೂ ಇದೆ ಎಂದರು.
ಕಂಬಳ ಓಟಗಾರರಿಗೆ 2 ದಿನಗಳಲ್ಲಿ ಕೋಣಗಳನ್ನು ಓಡಿಸಲು ಅಸಾಧ್ಯವಾಗುತ್ತದೆ ಆದ್ದರಿಂದ ಒಂದೇ ದಿನದಲ್ಲಿ ಕಂಬಳ ಮುಗಿಸುವುದು ಸೂಕ್ತ ಎಂದು ಕಂಬಳ ಕೋಣಗಳ ಹಿರಿಯ ಯಜಮಾನ ಭಾಸ್ಕರ್ ಎಸ್.ಕೋಟ್ಯಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಹೊಕ್ಕಾಡಿಗೋಳಿ ಕಂಬಳದ ಸಂಘಟಕ ರಶ್ಮಿತ್ ಶೆಟ್ಟಿ ಮಾತನಾಡಿ, ಕಂಬಳ ಕೋಣಗಳ ಯಜಮಾನರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕಂಬಳ ಸಂಘಟಕರು, ಸಮಿತಿ ಮುಖಂಡರು ಸೇರಿ ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದರೆ ಒಳಿತು ಎಂದರು.
ಈಗಾಗಲೇ ಇರುವಂತೆ ಕಂಬಳಗಳಲ್ಲಿ ಎಲ್ಲ ಕೋಣಗಳಿಗೂ ಅವಕಾಶ ಕಲ್ಪಿಸೋಣ. ಕಂಬಳದ ರೂಪುರೇಷೆ, ಸಿದ್ಧತೆ ಕುರಿತು ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿಯವರ ಬಳಿ ಚರ್ಚಿಸಿದ ಬಳಿಕ ಪ್ರಕಟಿಸಲಾಗುವುದೆಂದು ಉಮಾನಾಥ ಕೋಟ್ಯಾನ್ ತಿಳಿಸಿದರು.
ಪ್ರಮುಖರಾದ ಪ್ರಸಾದ್ ಕುಮಾರ್, ನಾಗರಾಜ ಪೂಜಾರಿ, ಸುಚರಿತ ಶೆಟ್ಟಿ, ಈಶ್ವರ್ ಕಟೀಲ್, ಕೆ.ಆರ್.ಪಂಡಿತ್, ಸುನಿಲ್ ಆಳ್ವ, ಎಂ.ಎಸ್.ಕೋಟ್ಯಾನ್, ಕೆ.ಪಿ.ಜಗದೀಶ್ ಅಧಿಕಾರಿ, ಮೇಘನಾಥ ಶೆಟ್ಟಿ, ಕೆ.ಕೃಷ್ಣರಾಜ ಹೆಗ್ಡೆ, ಶಾಂತಿಪ್ರಸಾದ್ ಹೆಗ್ಡೆ, ಪಶುವೈದ್ಯಾಧಿಕಾರಿ ಡಾ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸುರೇಶ್ ಕೆ.ಪೂಜಾರಿ ನಿರೂಪಿಸಿದರು.
Kshetra Samachara
09/01/2021 09:08 pm