ಕುಂದಾಪುರ: ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳ್ಳದೇ ಇರುವುದಕ್ಕೆ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಸಂಸದೆ ಶೋಭಾ ಕರಂದ್ಲಾಜೆಯವರ ನಿರ್ಲಕ್ಷ್ಯತನವೂ ಮುಖ್ಯ ಕಾರಣ ಎಂದು ಪುರಸಭಾ ಸದಸ್ಯ ಚಂದ್ರಶೇಖರ್ ಖಾರ್ವಿ ಕಟುವಾಗಿ ಖಂಡಿಸಿದರು.
ಬುಧವಾರ ಪುರಸಭೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗ ಕಂಪೆನಿ ಅಧಿಕಾರಿಗಳಿಗೆ ಬಾಯಿ ಮಾತಿನಲ್ಲಿ ಎಚ್ಚರಿಕೆ ನೀಡಿದರೇ ಪ್ರಯೋಜನವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭಾ ಹಿರಿಯ ಸದಸ್ಯ ಮೋಹನ್ ದಾಸ್ ಶೆಣೈ ಅವರು ರಾಷ್ತ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗುವಾಗ ನಿಮ್ಮ ಕಾಂಗ್ರೆಸ್ ಸರಕಾರದ ಇತ್ತು. ಆಗ ನೀವು ಮಾಡಿದ ತಪ್ಪುಗಳಿಗೆ ಭಾಜಪ ಸರಕಾರ ಹೆಗಲು ಕೊಟ್ಟು ಆ ಸಮಸ್ಯೆಯನ್ನು ಈಗ ಬಗೆ ಹರಿಸಲು ಪ್ರಯತ್ನಿಸುತ್ತಿದೆ ಎಂದರು. ಪುರಸಭಾ ಸದಸ್ಯ ಗಿರೀಶ್ ಮಾತಾಡಿ ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಜನರ ಸಮಸ್ಯೆ ಬಗೆಹರಿಸೋಣ ಎಂದರು. ಸಭೆಯಲ್ಲಿ ಸ್ವಲ್ಪ ಕಾಲ ಭಾಜಪ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಜಟಾಪಟಿ ನಡೆಯಿತು.
ರಾಷ್ಟ್ರೀಯ ಪ್ರಾಧಿಕಾರದ ತಾಂತ್ರಿಕ ಎಂಜಿನಿಯರ್ ರಮೇಶ್ ಬಾಬು ಪ್ರತಿಕ್ರಿಯಿಸಿ ಪ್ರತಿನಿತ್ಯ ಕುಂದಾಪುರ ಮೇಲ್ಸೆತುವೆ ಕಾಮಗಾರಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಜಿಲ್ಲಾಧಿಕಾರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಸರ್ವೀಸ್ ರಸ್ತೆಯಲ್ಲಿ ಬೆಳೆದಿರುವ ಹುಲ್ಲುಗಳನ್ನು ಕತ್ತರಿಸಿ, ಹೊಂಡಗಳನ್ನು ವಾರದೊಳಗೆ ಮುಚ್ಚಿಸಿ ವ್ಯವಸ್ಥಿತ ರಸ್ತೆ ಮಾಡಿಸಿತ್ತೇನೆ. ಮೇಲ್ಸೆತುವೆ ಕಾಮಗಾರಿ ಕೊರೋನಾದಿಂದ ವಿಳಂಬವಾಗಿದ್ದು ಹಿರಿಯ ಅಧಿಕಾರೊಗಳೊಂದಿಗೆ ಚರ್ಚಿಸಿ ಶ್ರೀಘ್ರವಾಗಿ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಎಂದರು.
ಸಭೆಯಲ್ಲಿ ಜಲಮಂಡಳಿಯ ಹಿರಿಯ ಅಧಿಕಾರಿಗಳು ಗೈರಾಗಿ ಕಿರಿಯ ಅಧಿಕಾರಿಗಳು ಹಾಜಾರಾಗಿದ್ದನ್ನು ಎಲ್ಲ ಸದಸ್ಯರು ಆಕ್ಷೇಪಿಸಿದರು.
ನೀರು ಪೂರೈಕೆಯಲ್ಲಿ ಅನೇಕ ಸಮಸ್ಯೆಗಳಿದ್ದು ಇವೆಲ್ಲಕ್ಕೂ ಉತ್ತರವನ್ನು ಹಿರಿಯ ಅಧಿಕಾರಿಗಳೇ ನೀಡಬೇಕೆಂದು ಸದಸ್ಯರು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವೀಣಾ ಭಾಸ್ಕರ್ ಹಿರಿಯ ಅಧಿಕಾರಿಯನ್ನು ಮುಂದಿನ ಸಭೆಯಲ್ಲಿ ಹಾಜರಿರುವಂತೆ ತಾಕೀತು ಮಾಡಿದರು.
Kshetra Samachara
07/01/2021 03:33 pm