ಮಂಗಳೂರು: ಜಾತ್ಯತೀತ ಪಕ್ಷಗಳೆಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಮತ ಹಾಕಿ ಗೆಲ್ಲಿಸಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ 17 ಶಾಸಕರು ತಲಾ 50 ಕೋಟಿಗೆ ದನಗಳಂತೆ ಮಾರಾಟವಾಗುವಾಗ ಎನ್ಐಎ, ಸಿಬಿಐ, ಇಡಿ ಎಲ್ಲಿ ಹೋಗಿತ್ತು ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಪ್ರಶ್ನಿಸಿದರು.
ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಎಸ್ ಡಿಪಿಐ ಅಭ್ಯರ್ಥಿಗಳಿಗೆ ನಗರದ ಪುರಭವನದಲ್ಲಿ ನಡೆದ ಅಭಿನಂದನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರಿ ತನಿಖಾ ಸಂಸ್ಥೆಗಳಾದ ಎನ್ಐಎ, ಸಿಬಿಐ, ಇಡಿ ತಮ್ಮ ಕಚೇರಿಯ ಮುಂದಿನ ಬೋರ್ಡ್ ತೆಗೆದು ಬಿಜೆಪಿ ಕಾರ್ಯಾಲಯ ಎಂದು ಬೋರ್ಡ್ ಹಾಕಿಕೊಳ್ಳಲಿ ಎಂದು ವ್ಯಂಗ್ಯವಾಡಿದರು.
ದ.ಕ.ಜಿಲ್ಲೆಯ ಎಸ್ಪಿಯವರು ಬಿಜೆಪಿ ಗುಲಾಮರಂತೆ ವರ್ತಿಸುತ್ತಿದ್ದು, ಯಾವುದೋ ಚಾನೆಲ್ ಗಳು ವರದಿ ಮಾಡಿದ್ದಾರೆಂದು ಎಸ್ ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಎಸ್ಪಿಯವರಿಗೆ ಖಾಕಿಯ ಧರ್ಮದಂತೆ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ಕಾವಿ ತೊಟ್ಟು ತೊಲಗಲಿ. ಯಾರೋ ಬಿಜೆಪಿ ನಾಯಕರು ಹೇಳಿದಂತೆ ಕೆಲಸ ಮಾಡುವುದಾದಲ್ಲಿ ದ.ಕ.ಜಿಲ್ಲಾ ಎಸ್ಪಿಯವರು ಅಣ್ಣಾಮಲೈಯಂತೆ ಬಿಜೆಪಿ ಸೇರಿ ಕೊಳ್ಳಲಿ ಎಂದರು.
ಎಸ್ ಡಿಪಿಐ ವಿರುದ್ಧ ಪ್ರಕರಣ ದಾಖಲಿಸಿ ಬೆದರಿಸಲು ಸಾಧ್ಯವಿಲ್ಲ. ಎಷ್ಟು ಅದುಮಿ ಇಡಲು ಪ್ರಯತ್ನಿಸುವಿರೋ ಅಷ್ಟು ಎಸ್ ಡಿಪಿಐ ಸ್ಪ್ರಿಂಗ್ ನಂತೆ ಪುಟಿದೆದ್ದು ಬರುತ್ತದೆ. ಫಿನಿಕ್ಸ್ ನಂತೆ ಮತ್ತೆ ಎದ್ದು ಬರಲಿದೆ. ಎಸ್ ಡಿಪಿಐ ಬಗ್ಗೆ ಎಷ್ಟೇ ಅಪಪ್ರಚಾರ ಮಾಡಿದರೂ ಅಷ್ಟೇ ಜನ ನಮಗೆ ಬೆಂಬಲ ನೀಡುತ್ತಾರೆ. ಮುಂದಿನ ತಾಪಂ, ಜಿಪಂ, ವಿಧಾನಸಭೆ ಚುನಾವಣೆಯನ್ನೂ ಗ್ರಾಪಂ ಚುನಾವಣೆ ಗೆದ್ದಂತೆ ಗೆದ್ದು ಬರುತ್ತೇವೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
Kshetra Samachara
03/01/2021 09:14 pm