ಮಂಗಳೂರು: ಇಂಧನ, ರಸಗೊಬ್ಬರ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದನ್ನು ಮರೆಮಾಚಲು ಬಿಜೆಪಿ ದ್ವೇಷ ರಾಜಕಾರಣಕ್ಕೆ ಇಳಿದಿದೆ. ಕೋಮುದ್ವೇಷದ ವಾತಾವರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಅತಿರೇಕಕ್ಕೆ ತಲುಪಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬುದ್ಧಿವಂತರ ಜಿಲ್ಲೆಯನ್ನು ಕೋಮುವಾದದ ಪ್ರಯೋಗಾಲಯ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ಹೇರಲಾಗಿದೆ. ಹಲಾಲ್ ಬಹಿಷ್ಕಾರ ಮೂಲಕ ಬಿಜೆಪಿ ಧ್ರುವೀಕರಣ ನಡೆಸುತ್ತಿದೆ. ದೇವಸ್ಥಾನದ ಕಾರ್ಯಕ್ರಮಗಳನ್ನೂ ಕೋಮುವಾದಕ್ಕೆ ಬಳಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುವಾದದ ಹತ್ಯೆ ಹಿಂದೆ ಎರಡು ಮತೀಯ ಸಂಘಟನೆಗಳಷ್ಟೇ ಇವೆ. ಹತ್ಯೆಯಲ್ಲಿ ಯಾವತ್ತೂ ಕಾಂಗ್ರೆಸ್ ಹಿಂದೂವಾಗಲೀ, ಮುಸ್ಲಿಮನಾಗಲೀ ಯಾರೂ ಇಲ್ಲ ಎಂದ ಅವರು, ಎರಡೂ ಕಡೆಯ FIRಗಳಲ್ಲಿ ಮುಸ್ಲಿಂ, ಹಿಂದೂ ಮತೀಯ ಸಂಘಟನೆಗಳಿವೆ. ಕಾಂಗ್ರೆಸ್ ಆಡಳಿತದ ಪಂಚಾಯತ್ ಉಪಾಧ್ಯಕ್ಷನ ಹತ್ಯೆಯೂ ನಡೆದಿತ್ತು. ಕೆಲವರು ಆ್ಯಕ್ಷನ್ , ರಿಯಾಕ್ಷನ್ ಎನ್ನುತ್ತಾರೆ. ಆದರೆ ಕಾಂಗ್ರೆಸ್ ಯಾವತ್ತೂ ಪ್ರತೀಕಾರಕ್ಕೆ ಇಳಿದಿಲ್ಲ. ಕಾಂಗ್ರೆಸ್ ಅಂಬೇಡ್ಕರ್ ಸಂವಿಧಾನ ಪ್ರಕಾರ ನಡೆಯುತ್ತದೆ. ಬಿಜೆಪಿಯ ದ್ವೇಷ ಅಭಿಯಾನ ಉಲ್ಬಣಿಸಿದರೆ ಜನಾಂಗೀಯ ದ್ವೇಷಕ್ಕೆ ಕಾರಣವಾಗಲಿದೆ. ಸಮಾಜದಲ್ಲಿ ಶಾಂತಿ, ಪ್ರೀತಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇನೆ. ಬಿಜೆಪಿ ತಕ್ಷಣವೇ ದ್ವೇಷ ರಾಜಕಾರಣದ ವೋಟ್ ಬ್ಯಾಂಕ್ ನಿಲ್ಲಿಸಬೇಕು ಎಂದರು.
ಇನ್ನು ಜಿಲ್ಲಾಡಳಿತವು ಶಾಂತಿ ಸಭೆಯನ್ನು ಕರೆದು ಮುಂದಾಗುವ ಅನಾಹುತ ತಪ್ಪಿಸಬೇಕು. ದೇವರು, ಧರ್ಮ, ದೇಶಪ್ರೇಮದ ಹೆಸರಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ಜೈಲು ಹೋದವರನ್ನು ಟೀಕಿಸುವವನು ನಿಜವಾದ ದೇಶದ್ರೋಹಿ. ನೆಹರೂ ಅವರು ತನ್ನ ಇಡೀ ಕುಟುಂಬವನ್ನೇ ದೇಶಕ್ಕಾಗಿ ಅರ್ಪಿಸಿದೆ. ಮುಸ್ಲಿಮರ ಸ್ವಯಂಪ್ರೇರಿತ ಬಂದ್ ನಿಂದಾಗಿ ವ್ಯಾಪಾರ ಬಹಿಷ್ಕಾರ ಅನ್ನೋದು ಸುಳ್ಳು. 2-3 ವರುಷಗಳ ಹಿಂದೆಯೇ ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಹಿಜಾಬ್ ವಿಚಾರಕ್ಕೂ, ಇದಕ್ಕೂ ಸಂಬಂಧವಿದೆ ಅನ್ನೋದು ಒಪ್ಪತಕ್ಕದ್ದಲ್ಲ ಎಂದರು.
PublicNext
04/04/2022 05:43 pm