ಮಂಗಳೂರು: ರಾಜ್ಯ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ದಕ್ಷಿಣ ಕನ್ನಡ - ಉಡುಪಿ ಜಿಲ್ಲೆಗಳ ಪ್ರವಾಸದ ಹಿನ್ನೆಲೆಯಲ್ಲಿ ಇಂದು ಶ್ರೀಕ್ಷೇತ್ರ ಕುದ್ರೋಳಿಗೆ ಭೇಟಿ ನೀಡಿದರು.
ಶ್ರೀಕ್ಷೇತ್ರ ಕುದ್ರೋಳಿಯ ಗೋಕರ್ಣನಾಥ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಸ್ಥಾನದ ವತಿಯಿಂದ ರಾಜ್ಯಪಾಲರಿಗೆ ಶಾಲು, ಫಲಪುಷ್ಪ,ದೇವರ ವಿಗ್ರಹ ನೀಡಿ ವಿಶೇಷ ಗೌರವ ಸಲ್ಲಿಸಲಾಯಿತು. ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದವರ ದಾಖಲೆ ಪುಸ್ತಕದಲ್ಲಿ ರಾಜ್ಯಪಾಲರು ಹೆಸರು ಸಹಿಯನ್ನು ದಾಖಲಿಸಿದರು. ಬಳಿಕ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರ ಆತ್ಮಕಥೆಯ ಇಂಗ್ಲಿಷ್ ಅನುವಾದ ಪುಸ್ತಕವನ್ನು ನೀಡಲಾಯಿತು.
ಅದಕ್ಕಿಂತ ಮೊದಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರನ್ನು ಜಿಲ್ಲಾಡಳಿತದ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸಿ.ಇ.ಒ ಡಾ ಕುಮಾರ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಕ್ಷೇತ್ರಕ್ಕೆ ರಾಜ್ಯಪಾಲರ ಭೇಟಿ ಹಿನ್ನೆಲೆ ಬಿಗಿಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು. ಸಂಜೆ ಮೂಡಬಿದರೆಯ ಸಾವಿರ ಕಂಬದ ಬಸದಿ, ಜೈನ ಬಸದಿಗೆ ಭೇಟಿ ನೀಡಲಿದ್ದಾರೆ. ಬಳಿಕ ಕಾರ್ಕಳ ಉತ್ಸವ ಕಾರ್ಯಕ್ರಮದಲ್ಲೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಲಿದ್ದಾರೆ.
PublicNext
14/03/2022 03:31 pm