ಮಂಗಳೂರು: ಮೈಸೂರಿನ ನಂಜನಗೂಡಿನಲ್ಲಿ ದೇವಸ್ಥಾನ ಒಡೆದು ಹಾಕಿದ ಕ್ರಮವನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಮಂಗಳೂರಲ್ಲಿ ಪ್ರತಿಭಟನೆ ನಡೆಸಿದರು. ಮಂಗಳೂರು ನಗರದ ಮಲ್ಲಿಕಟ್ಟೆ ವೃತ್ತದಲ್ಲಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಮೆರವಣಿಗೆ ನಡೆಸಿ, ಪ್ರತಿಭಟಿಸಿದ್ದಾರೆ.
ಈ ವೇಳೆ, ಬಿಜೆಪಿ ಮತ್ತು ಬಿಜೆಪಿ ಸರಕಾರಕ್ಕೆ ಕಾರ್ಯಕರ್ತರು ಧಿಕ್ಕಾರ ಕೂಗಿದರು. ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಬಿಜೆಪಿಗೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ ಎನ್ನುತ್ತಾ ಘೋಷಣೆ ಕೂಗಿದ್ದಾರೆ. ಬಿಜೆಪಿ ಕಾರ್ಯಕರ್ತರೇ ಪ್ರತಿಭಟನೆಯ ನೆಪದಲ್ಲಿ ತಮ್ಮದೇ ಪಕ್ಷ ಮತ್ತು ತಮ್ಮದೇ ಸರಕಾರಕ್ಕೆ ಧಿಕ್ಕಾರ ಕೂಗಿದ್ದು ವಿಶೇಷವಾಗಿತ್ತು. ಹನುಮಾನ್ ಚಾಲೀಸಾ ಮಂತ್ರಪಠಣವನ್ನು ಮಾಡಿ ಬಳಿಕ ಪ್ರತಿಭಟನೆ ನಡೆಸಿದ್ದಾರೆ.
ದೇವಸ್ಥಾನ ಒಡೆದು ಹಾಕಿರುವ ಘಟನೆಯ ಹಿಂದೆ ಷಡ್ಯಂತ್ರವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಯಾರು ತಪ್ಪಿತಸ್ಥರಿದ್ದಾರೆ, ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
Kshetra Samachara
16/09/2021 12:50 pm