ಮಂಗಳೂರು: ತೋಕೂರು ಹಳ್ಳ ಹಾಗೂ ಫಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಹರಿಯಬಿಡುತ್ತಿರುವ ಎಂಆರ್ ಪಿಎಲ್ ಕಂಪೆನಿ ಹಾಗೂ ಬೈಕಂಪಾಡಿ ಪರಿಸರದ ಮಧ್ಯಮ ಕೈಗಾರಿಕಾ ಘಟಕಗಳ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ "ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ" ನೇತೃತ್ವದಲ್ಲಿ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಮುಂಭಾಗ ಪೊರಕೆ ಹಿಡಿದು ಪ್ರತಿಭಟನಾ ಧರಣಿ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಎಂಆರ್ ಪಿಎಲ್ ಸಹಿತ ಸುತ್ತಲಿನ ಕೈಗಾರಿಕೆಗಳು ತ್ಯಾಜ್ಯ ನೀರನ್ನು ನೇರವಾಗಿ ತೋಕೂರು ಹಳ್ಳಕ್ಕೆ ಹರಿಯಬಿಡುತ್ತಿದೆ. ಈ ಕುರಿತು ಹಲವು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತಕ್ಕೆ ದೂರು ನೀಡಿದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಎಂಆರ್ ಪಿಎಲ್ ನಂತಹ ಸಾರ್ವಜನಿಕ ರಂಗದ ಬೃಹತ್ ಕಂಪೆನಿ ನಿರ್ಲಜ್ಜವಾಗಿ ಕುಡಿಯುವ ನೀರಿನ ಮೂಲಗಳಿಗೆ ತ್ಯಾಜ್ಯನೀರನ್ನು ಹರಿಯಬಿಡುವುದು ಕ್ಷಮಾರ್ಹ ಅಲ್ಲ. ಘೋರ ಪರಿಸರ ಮಾರಕ ತ್ಯಾಜ್ಯಗಳ ಸತತ ಹರಿಯುವಿಕೆಯಿಂದ ತೋಕೂರು ಹಳ್ಳ, ಹಾಗೂ ಫಲ್ಗುಣಿ ನದಿಯ ನೀರು ವಿಷಮಯಗೊಂಡಿದೆ. ಅಲ್ಲದೆ ಅಂತರ್ಜಲ ಮಲಿನಗೊಂಡು ಸ್ಥಳೀಯ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಗಂಭೀರವಾದ ಅಪರಾಧವನ್ನು ಎಸಗುತ್ತಿರುವ ಕಂಪೆನಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಸ್ಥಳೀಯ ಗ್ರಾಪಂ ಪ್ರತಿನಿಧಿಗಳು ಒಳಗೊಂಡ ತಂಡವನ್ನು ಎಂಆರ್ ಪಿಎಲ್ ಸಹಿತ ಸ್ಥಳೀಯ ಕೈಗಾರಿಕಾ ಘಟಕಗಳಿಗೆ ಕರೆದೊಯ್ದು ಪರಿಶೀಲನೆ ನಡೆಸಬೇಕು. ಫಲ್ಗುಣಿ ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಬಿಗು ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮಾಲಿನ್ಯ ನಿಯಂತ್ರ ಮಂಡಳಿ ಕಚೇರಿಗೆ ಬೀಗ ಜಡಿದು ಅನಿರ್ಧಿಷ್ಟ ಧರಣಿ ನಡೆಸುವುದುಗಾಗಿ
ಮುನೀರ್ ಕಾಟಿಪಳ್ಳ ಎಚ್ಚರಿಸಿದರು.
Kshetra Samachara
30/09/2021 08:05 pm