ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಮಲೆನಾಡಿನಲ್ಲಿ ಪ್ರಾರಂಭಗೊಂಡ ಸಾವರ್ಕರ್ ಕುರಿತ ಪರ- ವಿರೋಧ ಕರಾವಳಿಗೂ ವಿಸ್ತರಿಸಿದೆ. ಶಿವಮೊಗ್ಗದಲ್ಲಿ ಸಾವರ್ಕರ್ ಭಾವಚಿತ್ರವನ್ನು ವಿರೋಧಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಬಳಿಕ ಅದು ಬಿಜೆಪಿಯ ಪ್ರಯೋಗಶಾಲೆ ಕರಾವಳಿಗೂ ಕಾಲಿಟ್ಟಿದೆ.
ಕಳೆದೆರಡು ದಿನಗಳಿಂದ ಕೃಷ್ಣನಗರಿಯಲ್ಲಿ ಸಾವರ್ಕರ್ ಫ್ಲೆಕ್ಸ್ ಸಾಕಷ್ಟು ಸದ್ದು ಮಾಡುತ್ತಿದೆ. ಸ್ವಾತಂತ್ರ್ಯ ದಿನದಂದು ಹಿಂದೂ ಸಂಘಟನೆಯವರು ಇಲ್ಲಿನ ಬ್ರಹ್ಮಗಿರಿ ಸರ್ಕಲ್ ನಲ್ಲಿ ವೀರ ಸಾವರ್ಕರ್ ಮತ್ತು ನೇತಾಜಿ ಸುಭಾಶ್ ಚಂದ್ರ ಬೋಸ್ ಫೋಟೊ ಇರುವ ಫ್ಲೆಕ್ಸ್ ನ್ನು ದಿಢೀರೆಂದು ಅಳವಡಿಸಿದ್ದರು. ಸಾವರ್ಕರ್ ಭಾವಚಿತ್ರ ಇರುವ ಮತ್ತು ಹಿಂದೂ ರಾಷ್ಟ್ರ ಎಂಬ ಬರಹ ಇದ್ದ ಈ ಫ್ಲೆಕ್ಸ್ ಮೊದಲು ಕಣ್ಣು ಕುಕ್ಕುವಂತೆ ಮಾಡಿದ್ದು ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳಿಗೆ.
ಬ್ರಹ್ಮಗಿರಿ ಸರ್ಕಲ್ ನಲ್ಲಿ ಈ ಫ್ಲೆಕ್ಸ್ ಕಂಡ ತಕ್ಷಣ ಉಡುಪಿ ಠಾಣೆಗೆ ದೌಡಾಯಿಸಿದ ಪಿಎಫ್ ಐ ಮುಖಂಡರು, ಫ್ಲೆಕ್ಸ್ ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಫ್ಲೆಕ್ಸ್ ಅಳವಡಿಸಲಾದ ಬ್ರಹ್ಮಗಿರಿ ಸರ್ಕಲ್ ಗೆ ಭದ್ರತೆ ಒದಗಿಸಿದ್ದಾರೆ. ತಕ್ಷಣ ಜಾಗೃತಗೊಂಡ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಫ್ಲೆಕ್ಸ್ ರಕ್ಷಣೆಗೆ ಮುಂದಾಗಿವೆ. ಸಚಿವ ಸುನಿಲ್ ಕುಮಾರ್ , "ಸಾವರ್ಕರ್ ಭಾವಚಿತ್ರಕ್ಕೆ ವಿರೋಧ ವ್ಯಕ್ತಪಡಿಸುವುದನ್ನು ಸಹಿಸುವುದಿಲ್ಲ" ಎಂದು ಗುಟುರು ಹಾಕಿದ್ದಾರೆ. ಆ ಮೂಲಕ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇವತ್ತು 2ನೇ ಹಂತದ ಕಾರ್ಯತಂತ್ರ ಬಿಜೆಪಿ ಪಕ್ಷದಿಂದ ಪ್ರಾರಂಭಗೊಂಡಿದೆ. ಈ ಫ್ಲೆಕ್ಸ್ ನ್ನು ಕಾಂಗ್ರೆಸ್ ವಿರೋಧಿಸಲಿ. ಆ ಮೇಲೆ ನೋಡಿಕೊಂಡರಾಯಿತು ಎಂದು ಕಾಯುತ್ತಿದ್ದ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ತಡ, ತಕ್ಷಣ ರಂಗಪ್ರವೇಶ ಮಾಡಿದೆ! ಅದರ ಪರಿಣಾಮವಾಗಿ ಇವತ್ತು ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳಿಂದ ಎರಡು ಬಾರಿ ಪುಷ್ಪಾರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಬೆಳಿಗ್ಗಿನಿಂದ ಮಧ್ಯಾಹ್ನ ತನಕ ಬ್ರಹ್ಮಗಿರಿ ವೃತ್ತದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. ಮಾತ್ರವಲ್ಲ, ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಬಿಜೆಪಿ ಮುಖಂಡ ಯಶಪಾಲ್ ಸುವರ್ಣ, ಹಿಜಾಬ್ ವಿವಾದ ಆದಾಗ ಮುಂಚೂಣಿಯಲ್ಲಿ ನಿಂತು ಹಿಜಾಬ್ ನ್ನು ವಿರೋಧಿಸಿದ್ದರು. ಇವತ್ತು ಯಶಪಾಲ್ ನೇತೃತ್ವದಲ್ಲೇ ಸಾವರ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗಿದೆ. ಕೇವಲ ಭಾವಚಿತ್ರ ಮಾತ್ರವಲ್ಲ, ಇಲ್ಲಿ ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಯಶಪಾಲ್ ಸುವರ್ಣ ಘೋಷಿಸಿದ್ದಾರೆ.
ಕರಾವಳಿ ರಾಜ್ಯ ಬಿಜೆಪಿ ರಾಜಕೀಯದ "ಪ್ರಯೋಗಶಾಲೆ " ಎಂಬ ಮಾತು ಬಹಳ ವರ್ಷಗಳಿಂದಲೂ ಚಾಲ್ತಿಯಲ್ಲಿದೆ. ಬಿಜೆಪಿ ಸರಕಾರ ಬೇರೆ ಬೇರೆ ಕಾರಣಗಳಿಂದ ಆಡಳಿತ ವಿರೋಧಿ ಅಲೆಗೆ ಈಡಾಗುವ ಎಲ್ಲ ಲಕ್ಷಣಗಳಿವೆ ಎಂಬುದು ಸಮೀಕ್ಷೆಗಳಿಂದ ಈಗಾಗಲೇ ಬಹಿರಂಗಗೊಂಡಿದೆ.
ತನ್ನ ಮಂಕಾದ ಇಮೇಜ್ ನ್ನು ಮೇಲೆತ್ತಲು, ಬಿಜೆಪಿ ಸಾವರ್ಕರ್ ಅಸ್ತ್ರವನ್ನು ಮುಂದಿನ ಚುನಾವಣೆ ತನಕ ಉಪಯೋಗಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಈಗಾಗಲೇ ಸಾವರ್ಕರ್ ಪ್ರತಿಮೆ ನಿರ್ಮಾಣ ಮಾಡುವ ಹೇಳಿಕೆಯನ್ನು ಬಿಜೆಪಿ ನಾಯಕರು ನೀಡಿದ್ದಾರೆ. ಇದು ಕಾರ್ಯರೂಪಕ್ಕೆ ಬಂದದ್ದೇ ಆದರೆ ಬಿಜೆಪಿ ಇದೇ ವಿಷಯದ ಮೇಲೆ ಮುಂದಿನ ವಿಧಾನಸಭೆ ಚುನಾವಣೆಗೆ ಹೋದರೂ ಅಚ್ಚರಿಪಡಬೇಕಿಲ್ಲ.
PublicNext
17/08/2022 10:49 pm