ಪಡುಬಿದ್ರೆ : ಕರಾವಳಿಯ ದಲಿತ ಸಮುದಾಯದ ಪವಿತ್ರ ಕ್ಷೇತ್ರವಾಗಿರುವ ಕಂಚಿನಡ್ಕ ಬಬ್ಬುಸ್ವಾಮಿ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಎದುರಾಗಿದ್ದು, ಹೊಸದೊಂದು ವಿವಾದ ತಲೆದೋರಿದೆ. ಮುಂಡಾಲ ಸಮಾಜದ ಪವಿತ್ರ ಸ್ಥಳ ಕಂಚಿನಡ್ಕದಲ್ಲಿ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವ ಮೂಲ ಕ್ಷೇತ್ರವಿದೆ. ಈ ಜಾಗಕ್ಕೆ ಸೂಕ್ತ ಮೇಲ್ಛಾವಣಿಯ ವ್ಯವಸ್ಥೆ ಇಲ್ಲ. ಈಗ ದಾನಿಯೊಬ್ಬರು ಮೇಲ್ಛಾವಣಿ ಮಾಡಲು ಮುಂದಾಗಿದ್ದು, ಇದಕ್ಕೆ ಸ್ಥಳೀಯ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದಾರೆ.
ಮೇಲ್ಛಾವಣಿ ಅಳವಡಿಸಿದರೆ ನಮ್ಮ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತದೆ ಎನ್ನುವುದು ಮುಸ್ಲಿಮರ ವಾದ. ಕಂಚಿನಡ್ಕ ಎಸ್ಡಿಪಿಐ ಪಕ್ಷದಲ್ಲಿ ದಲಿತ ಮುಖಂಡರೂ ಇದ್ದಾರೆ. ಆದ್ರೆ ಈ ವಿಚಾರದಲ್ಲಿ ಎಸ್ಡಿಪಿಐ ಮುಸ್ಲಿಂರ ಪರವಾಗಿ ನಿಂತಿದೆ. ಈ ನಡೆಯಿಂದ ಬೇಸತ್ತು ಎಸ್ಡಿಪಿಐ ದಲಿತ ಮುಖಂಡ ಸದಾಶಿವ ಕಂಚಿನಡ್ಕ ಈಗಾಗಲೇ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಪಕ್ಷದ ವಿರುದ್ಧ ಹೋರಾಟಕ್ಕೆ ನಿಂತಿದ್ದಾರೆ.
ಇನ್ನು ಶಾಂತಿಸಭೆಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಅವಕಾಶ ನೀಡೋದಿಲ್ಲ ಅಂತ ಎಸ್ಡಿಪಿಐ ಮುಖಂಡರು ಪೊಲೀಸರ ಎದುರೇ ಹೇಳಿದ್ದಾರೆ. ಇದೀಗ ದಲಿತ ಸಂಘಟನೆಗಳ ಬೆಂಬಲಕ್ಕೆ ಹಿಂದೂ ಜಾಗರಣ ವೇದಿಕೆ ಮುಂದಾಗಿದೆ. ವಾರದೊಳಗೆ ಈ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಹಿಂಜಾವೇ ಎಚ್ಚರಿಕೆ ನೀಡಿದೆ.
ಇತ್ತ ಪಡುಬಿದ್ರೆ ಗ್ರಾಮಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರಿದ್ದರೂ ಅವರು ಎಸ್ಡಿಪಿಐ ಬೆಂಬಲಿತ ಸದಸ್ಯರ ಮುಲಾಜಿಗೆ ಬಿದ್ದಂತೆ ಕಾಣುತ್ತಿದೆ. ಇದು ಹಿಂದೂಪರ ಸಂಘಟನೆಗಳನ್ನು ಕೆರಳಿಸಿದ್ದು ಪಂಚಾಯತ್ ವಿರುದ್ಧ ಹೋರಾಟಕ್ಕೆ ಕರೆ ನೀಡುವ ಸಾಧ್ಯತೆ ಇದೆ.
Kshetra Samachara
30/05/2022 02:11 pm