ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯ ಕಾರ್ನಾಡ್ ತಹಶೀಲ್ದಾರ್ ಕಚೇರಿಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು.
ಶಾಸಕರು ಬೆಳಗ್ಗೆ ಸುಮಾರು 10. 45ಕ್ಕೆ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದ್ದರೂ ಈ ಅವಧಿಯಲ್ಲಿ ತಹಶೀಲ್ದಾರ್ ಕಮಲಮ್ಮ ಕಚೇರಿಯಲ್ಲಿ ಇರಲಿಲ್ಲ!
ಈ ಸಂದರ್ಭ ಶಾಸಕರು ಕಚೇರಿ ಸಿಬ್ಬಂದಿ ಹಾಗೂ ಕಂದಾಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡು ಸಿಬ್ಬಂದಿ ಮೂಲಕ ಟೇಬಲ್ ಮೇಲಿಟ್ಟಿದ್ದ ಕಡತಗಳನ್ನು ಪರಿಶೀಲಿಸಿದರು.
ಆಗ ಕಳೆದ ಡಿಸೆಂಬರ್ 13ರ ನಂತರ ವಿಲೇವಾರಿಯಾಗದ ಕಡತಗಳು ಅಲ್ಲೇ ಬಿದ್ದಿತ್ತು. ಇದನ್ನು ಕಂಡ ಶಾಸಕರು ಮತ್ತೆ ಆಕ್ರೋಶಗೊಂಡು ಕೂಡಲೇ ಜಿಲ್ಲಾಧಿಕಾರಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತಹಸೀಲ್ದಾರ್ ಕಮಲಮ್ಮ ನವರ ಕರ್ತವ್ಯಲೋಪದ ಬಗ್ಗೆ ತಿಳಿಸಿ ವರ್ಗಾವಣೆ ಇಲ್ಲದಿದ್ದರೆ ಅಮಾನತು ಮಾಡಲು ಸೂಚನೆ ನೀಡಿದರು.
11 ಗಂಟೆ ಬಳಿಕ ಕಚೇರಿಗೆ ತಹಶೀಲ್ದಾರ್ ಕಮಲಮ್ಮ ಬಂದಾಗ ಶಾಸಕರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದರು. ಕಕ್ಕಾಬಿಕ್ಕಿಯಾದ ತಹಸೀಲ್ದಾರ್, ಅನಾರೋಗ್ಯದ ಕಾರಣದಿಂದಾಗಿ ಕಡತಗಳು ಬಾಕಿಯಾಗಿದೆ ಎಂದು ಕುಂಟುನೆಪ ಹೇಳಿದರು.
ಇದರಿಂದ ಮತ್ತಷ್ಟು ಕೋಪಗೊಂಡ ಶಾಸಕರು, ಮಧ್ಯಾಹ್ನದ ಒಳಗೆ ಕಡತ ವಿಲೇವಾರಿಯಾಗಬೇಕು ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗಬೇಕು ಎಂದು ತಾಕೀತು ಮಾಡಿದರು.
ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಂಡಲಾಧ್ಯಕ್ಷ ಸುನಿಲ್ ಆಳ್ವ, ಶೈಲೇಶ್ ಕುಮಾರ್, ವಿಠಲ್ ಎನ್.ಎಂ., ರಮಾನಾಥ ಪೈ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
04/01/2022 03:35 pm