ಮೂಡುಬಿದಿರೆ: ಪುರಸಭೆ ವ್ಯಾಪ್ತಿಯಲ್ಲಿರುವ ಹಳೆಯ ಬಡಾವಣೆಗಳಲ್ಲಿ ಬಾಕಿ ಇರುವ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಪುರಸಭೆಯಿಂದಲೇ ಖಾತೆ ಮತ್ತು ಲೈಸೆನ್ಸ್ ನೀಡಲು ಸರ್ಕಾರ ಆದೇಶ ನೀಡಿದೆ ಎಂದು ಮುಡಾ ಅಧ್ಯಕ್ಷ ಮೇಘನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆಯಲ್ಲಿ ಮುಡಾದ ತಾಂತ್ರಿಕ ಸಮಸ್ಯೆಯಿಂದಾಗಿ ಸಾವಿರಾರು ಮಂದಿಗೆ ಮನೆ ನಿರ್ಮಾಣಕ್ಕೆ ಅಡಚಣೆಯಾಗಿದ್ದು, ಸರ್ಕಾರದ ಈ ಆದೇಶದಿಂದ ತಾತ್ಕಾಲಿಕ ಪರಿಹಾರ ದೊರೆತಿದೆ. ಮಹಾಯೋಜನೆ ಅನುಷ್ಠಾನಗೊಳ್ಳುವವರೆಗೆ ಪುರಸಭೆಯಿಂದಲೇ ಖಾತೆ ಲೈಸೆನ್ಸ್ ಪಡೆಯಬಹುದಾಗಿದೆ. ಶಾಸಕ ಉಮಾನಾಥ ಕೋಟ್ಯಾನ್, ನಗರಾಭಿವೃದ್ಧಿ ಸಚಿವ ಬಸವರಾಜ ಭೈರತಿ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಾಲ್ಕು ಬಾರಿ ಸಭೆ ನಡೆಸಿ ಇಲ್ಲಿನ ಸಮಸ್ಯೆಗಳನ್ನು ತೆರೆದಿಟ್ಟಿದ್ದು ಕೊನೆಗೂ ಪರಿಹಾರ ದೊರಕಿದೆ. ಇನ್ನು ಮೂರು ತಿಂಗಳೊಳಗೆ ಮಹಾಯೋಜನೆ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಮುಡಾದ ಸಮಸ್ಯೆಯಿಂದಾಗಿ ದಿನಂಪ್ರತಿ ನೂರಾರು ಮಂದಿ ನನ್ನ ಬಳಿ ಬಂದು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಡಾದ ಮಹಾಯೋಜನೆ ಅನುಷ್ಠಾನಗೊಳ್ಳುವಲ್ಲಿ ತೊಂದರೆಯಾಗಿದೆ. ಸಚಿವರು, ರಾಜ್ಯಾಧ್ಯಕ್ಷರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಬಳಿ ನಿರಂತರ ಸಭೆ ನಡೆಸಿ, ಸಮಾಲೋಚಿಸಿದ್ದೇನೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ. ಮಾತನಾಡಿ, ಈಗಿನ ಶಾಸಕರ ಪ್ರಾಮಾಣಿಕ ಪ್ರಯತ್ನದಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷ ಸ್ಮಜಾತ, ಎಪಿಎಂಸಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಜಿಪಂ ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ಮುಡಾ ಸದಸ್ಯರಾದ ಲಕ್ಷ್ಮಣ್ ಪೂಜಾರಿ, ಗೋಪಾಲ ಶೆಟ್ಟಿಗಾರ್, ಮಂಜುನಾಥ ರೈ ಉಪಸ್ಥಿತರಿದ್ದರು.
Kshetra Samachara
28/01/2021 01:25 pm