ಕಾರ್ಕಳ: ಲಾಕ್ ಡೌನ್ ಸಂದರ್ಭ ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ ನಡೆದಿದ್ದು,ಕಾರ್ಕಳ ಶಾಸಕರು ರಾಜೀನಾಮೆ ನೀಡಬೇಕು ಎಂದು ಕಾರ್ಕಳ ಪುರಸಭಾ ಸದಸ್ಯ ,ಕಾಂಗ್ರೆಸ್ ಮುಖಂಡ ಶುಭದ ರಾವ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಉಡುಪಿಯ ಪ್ರೆಸ್ ಕ್ಲಬ್ ನಲ್ಲಿ ದಾಖಲೆ ಬಿಡುಗಡೆ ಮಾಡಿದ ಅವರು, ಕೋವಿಡ್ ಲಾಕ್ ಡೌನ್ ಸಂದರ್ಭದ
ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಮಂಡಳಿಯು ಕಾರ್ಕಳಕ್ಕೆ 5000 ಆಹಾರ ಕಿಟ್ ವಿತರಿಸಲು ರೂ. 44,95,000 ಬಿಡುಗಡೆ ಮಾಡಿತ್ತು. ಆದರೆ, ಈ ಆಹಾರ ಕಿಟ್ ನ್ನು ನ್ಯಾಯಯುತವಾಗಿ ವಿತರಿಸದೆ ಕಾರ್ಕಳ ಶಾಸಕರು ತಮ್ಮದೇ ಸರಕಾರಕ್ಕೆ ಮತ್ತು ಜನತೆಗೆ ದ್ರೋಹ ಮಾಡಿದ್ದಾರೆ. ಆದ್ದರಿಂದ ಶಾಸಕರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತೀ ಕಿಟ್ ಗೆ 899 ರಂತೆ 5000 ಕಿಟ್ ಗೆ 45 ಲಕ್ಷ ರೂ. ತನಕ ಆಗುತ್ತದೆ.ಕಿಟ್ ಪಡೆದ ಫಲಾನುಭವಿಗಳ ಪಟ್ಟಿಯನ್ನು ಮಾಹಿತಿ ಹಕ್ಕಿನ ಮೂಲಕ ಪರಿಶೀಲಿಸಿದಾಗ ಇದೊಂದು ಬೋಗಸ್ ಪಟ್ಟಿ ಎಂಬುದು ತಿಳಿದುಬಂದಿದೆ.ಇದೇ ಪಟ್ಟಿಯನ್ನು ಸರಕಾರಕ್ಕೆ ನೀಡಿ ವಂಚಿಸಲಾಗಿದೆ.ಈ ಪಟ್ಟಿಯಲ್ಲಿ ಇರುವ ಅನೇಕರು ಕಿಟ್ ಪಡೆಯದವರಾಗಿದ್ದು ಬೇರೆ ಯೋಜನೆಯ ಫಲಾನುಭಾವಿಗಳಾಗಿದ್ದಾರೆ. ಮೃತಪಟ್ಟವರ ಹೆಸರೂ ಈ ಪಟ್ಟಿಯಲ್ಲಿದೆ ಎಂದು ಶುಭದ್ ರಾವ್ ದಾಖಲೆಗಳೊಂದಿಗೆ ಆರೋಪ ಮಾಡಿದ್ದಾರೆ.
ಕಾರ್ಮಿಕರಿಗೆ ಮತ್ತು ತನ್ನ ಸ್ವ ಕ್ಷೇತ್ರದ ಜನತೆಗೆ ವಂಚಿಸಿದ್ದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯ ಸಚೇತಕರೂ ಆದ ಶಾಸಕ ಸುನಿಲ್ ಕುಮಾರ್ ರಾಜೀನಾಮೆ ನೀಡುವುದರ ಜೊತೆಗೆ ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Kshetra Samachara
05/10/2020 01:51 pm