ಬೈಂದೂರು : ಕಳೆದ ಕೆಲದಿನಗಳಿಂದ ಬೈಂದೂರು ತಾಲೂಕಿನಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.ಮೀನುಗಾರರ ಮನೆಗಳು ಮತ್ತು ರಸ್ತೆಗಳು ಅಪಾಯದಲ್ಲಿವೆ. ಈ ಹಿನ್ನೆಲೆಯಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಕಿರಿಮಂಜೇಶ್ವರ ಮತ್ತು ಮರವಂತೆ ಪ್ರದೇಶಗಳಿಗೆ ಇಂದು ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮಳೆಗಾಲ ಆರಂಭದಿಂದಲೂ ಕಡಲ್ಕೊರೆತ ಪ್ರಾರಂಭವಾಗಿ ಸಾಕಷ್ಟು ಹಾನಿಯಾಗಿತ್ತು. ಈ ಬಗ್ಗೆ ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿ ಸೋತಿದ್ದ ಸ್ಥಳೀಯರು ಸಂಸದ ಭೇಟಿ ವೇಳೆ ಆಕ್ರೋಶ ಹೊರಹಾಕಿದ ಪ್ರಸಂಗ ನಡೆಯಿತು.
ಸ್ಥಳೀಯರ ಅಹವಾಲು ಆಲಿಸಿದ ಸಂಸದ ಬಿ.ವೈ.ರಾಘವೇಂದ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ಕುರಿತು ಅಸಮಾಧಾನ ಹೊರಹಾಕಿದ ಸ್ಥಳೀಯರು, ಕೇವಲ ಭರವಸೆ ಕೊಟ್ಟು ಹೋಗುವುದಲ್ಲ. ಇವತ್ತಿನಿಂದಲೇ ಕೆಲಸ ಶುರು ಮಾಡಲಿ, ಹದಿನೈದು ದಿನದಿಂದ ಆತಂಕದಲ್ಲೇ ದಿನ ದೂಡಿದ್ದೇವೆ. ಯಾವ ಜನಪ್ರತಿನಿಧಿಯೂ ಇತ್ತ ಕಡೆ ತಲೆಹಾಕಿಲ್ಲ. ಕೇಳಿದರೆ ದುಡ್ಡಿಲ್ಲ ಅಂತಾರೆ, ಇದಕ್ಕಾಗಿ ನಾವು ಇವರನ್ನೆಲ್ಲ ಗೆಲ್ಲಿಸಿದ್ದಾ? ಸರ್ಕಾರದ ಬಳಿ ದುಡ್ಡಿಲ್ಲ ಎಂದು ನಾವೇ ಹಣ ಬೇಡಿ ಮರಳು ತುಂಬಿಸಿ ತಡೆಗೋಡೆ ನಿರ್ಮಿಸಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮ ರಾವ್,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಬಂದರು ಮತ್ತು ಮೀನುಗಾರಿಕಾ ಅಧಿಕಾರಿಗಳಾದ ಉದಯ್ ಕುಮಾರ್ ಮತ್ತಿತರರು ಸಂಸದರ ಜೊತೆಗಿದ್ದರು.
Kshetra Samachara
07/07/2022 03:09 pm