ಉಡುಪಿ: ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರಾವಳಿ ಯೂತ್ ಕ್ಲಬ್ ಮತ್ತು ಖ್ಯಾತ ಮನೋವೈದ್ಯ ಡಾಕ್ಟರ್ ಪಿ. ವಿ ಭಂಡಾರಿ ನೇತೃತ್ವದಲ್ಲಿ ಮಲ್ಪೆಯಿಂದ ಮಣಿಪಾಲ ಜಿಲ್ಲಾಧಿಕಾರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಡಾ. ಪಿ.ವಿ.ಭಂಡಾರಿ, "ಇವತ್ತು ಮೂರ್ಖರ ದಿನಾಚರಣೆ. ನಾವೆಲ್ಲರೂ ಮೂರ್ಖರೇ. ಉಡುಪಿ ಜಿಲ್ಲೆಯಾಗಿ 22 ವರ್ಷ ಕಳೆದರೂ ಕೂಡ ನಮ್ಮ ರಾಜಕಾರಣಿಗಳು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಲೇ ಬಂದಿದ್ದಾರೆ. ಇಡೀ ರಾಜ್ಯದಲ್ಲಿ ಡಾ. ವಿ.ಎಸ್ ಆಚಾರ್ಯರು 12 ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿಸಿದ್ದರು.
ಆದರೆ ಅವರದೇ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು ಇನ್ನೂ ಕೂಡಾ ಮಂಜೂರು ಆಗಿಲ್ಲ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುವ ಸೂಚನೆಯನ್ನು ಶಾಸಕರು ನೀಡಿದ್ದಾರೆ. ಹೀಗಾದರೆ ಇನ್ನು ಮುಂದೆ ಸರಕಾರವನ್ನು ಕೂಡಾ ಪಿಪಿಪಿ ಮಾದರಿಯಲ್ಲಿ ನಡೆಸೋಣ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜನ್ನು ಮಾಡಿ 10 ವರ್ಷದ ನಂತರ ಮತ್ತೊಮ್ಮೆ ಪತ್ರಿಕಾಗೋಷ್ಠಿ ನಡೆಸಿ ಕಾಲೇಜನ್ನು ನಾವು ಸರಕಾರದ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಘೋಷಣೆ ಮಾಡುವ ಕಾಲ ಬರುತ್ತದೆ. ಖಾಸಗಿಯವರಿಗೆ ವೈದ್ಯಕೀಯ ಕಾಲೇಜು ನೀಡಿದರೆ ಅವರು ಕೇವಲ ವ್ಯವಹಾರ ಮಾತ್ರ ಮಾಡುತ್ತಾರೆ" ಎಂದರು.
ಮಲ್ಪೆ ಗಾಂಧಿ ಪ್ರತಿಮೆಯಿಂದ ಆರಂಭಗೊಂಡ ಪಾದಾಯಾತ್ರೆಯು ಮಲ್ಪೆ ,ಆದಿ ಉಡುಪಿ,ಉಡುಪಿ,ಎಂಜಿಎಂ ಮೂಲಕ ಸಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಮಾಪ್ತಿಗೊಂಡಿತು.ಪಾದಯಾತ್ರೆಯಲ್ಲಿ ಕೆಆರ್ ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಕರಾವಳಿ ಯೂತ್ ಕ್ಲಬ್ ಸದಸ್ಯರು ಮತ್ತು ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಹೋರಾಟಕ್ಕೆ ಬಲ ತುಂಬಿದರು.
PublicNext
01/04/2022 10:48 am