ಮಂಗಳೂರು: ಸ್ಥಳೀಯ ಉದ್ಯೋಗದ ಬೇಡಿಕೆಗಳನ್ನು ಈಡೇರಿಸಿ, ಯಾವುದೇ ರೀತಿಯ ವಿರೋಧಗಳು ವ್ಯಕ್ತವಾಗದಂತೆ ಕೆಐಒಸಿಎಲ್ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಐಒಸಿಎಲ್ ನ ಸಿಎಸ್‍ಆರ್ ನಿಧಿಯಡಿ ವಿವಿಧ ಸಂಸ್ಥೆಗಳು, ಇಲಾಖೆಗಳಿಗೆ ಒಟ್ಟು 2 ಕೋಟಿ ರೂ. ಮೊತ್ತದ ಚೆಕ್ ವಿತರಿಸಿ ಮಾತನಾಡಿದ ಅವರು, ಹೊಸ ಉದ್ದಿಮೆಗಳು ಆರಂಭವಾದಾಗ ಸ್ಥಳೀಯರಿಂದ ಉದ್ಯೋಗದ ಬೇಡಿಕೆಗಳು ಬರುವುದು ಸಹಜ. ಆ ಬೇಡಿಕೆಗಳನ್ನು ಪೂರೈಸಿರುವ ಕೆಐಒಸಿಎಲ್ ಕೋವಿಡ್ ಸಂದರ್ಭದಲ್ಲೂ ಮೂರು ಕಡೆಗಳಲ್ಲಿ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಘಟಕ, ಕಿಟ್ ವಿತರಣೆ, ಆಂಬ್ಯುಲೆನ್ಸ್ ನೀಡುವ ಮೂಲಕ ನೆರವಾಗಿದೆ. ಪ್ರಸ್ತುತ ಆರೋಗ್ಯ, ಸೇವೆ, ರಕ್ಷಣೆ, ಶಿಕ್ಷಣ ಹೀಗೆ ವಿಂಗಡಣೆ ಮಾಡಿಕೊಂಡು ಸಿಎಸ್‍ಆರ್ ನಿಧಿಯನ್ನು ವಿತರಿಸಿದೆ ಎಂದು ಶ್ಲಾಘಿಸಿದರು.
ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಕೆಐಒಸಿಎಲ್ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಯಂತ್ರ ಸ್ಥಾಪನೆಗೆ ನೆರವು ನೀಡಿದೆ. ಈ ಮೂಲಕ ಕಿಡ್ನಿ ಸಮಸ್ಯೆ ಎದುರಿಸುವ ರೋಗಿಗಳ ಚಿಕಿತ್ಸೆಗೆ ನೆರವಾಗುತ್ತಿದೆ. ಮಕ್ಕಳ ಸಹಾಯವಾಣಿಗೆ ತೀರಾ ಅಗತ್ಯವಿದ್ದ ವಾಹನ ಖರೀದಿಗೆ ಕೆಐಒಸಿಎಲ್ ಧನ ಸಹಾಯ ಒದಗಿಸಿದೆ ಎಂದರು.
ವೆನ್ಲಾಕ್ ಆಸ್ಪತ್ರೆಯ ಡಯಾಲೀಸಿಸ್ ಘಟಕ, ಪುತ್ತೂರು ಮಣಿಯಾಕರ ಶಾಲೆಗೆ ಎರಡು ಕೊಠಡಿಗಳು, ಕಾವೂರು ಪಿಯು ಕಾಲೇಜಿಗೆ ಎರಡು ಕೊಠಡಿಗಳ ನಿರ್ಮಾಣ, ಮಕ್ಕಳ ಸಹಾಯವಾಣಿ ಘಟಕಕ್ಕೆ ವಾಹನ, ವೆನ್ಲಾಕ್ ಆಸ್ಪತ್ರೆ ಕಟ್ಟಡ ದುರಸ್ತಿ, ಕುತ್ತಾರು ಮಂಗಳಾ ಸೇವಾ ಸಮಿತಿ ಹಾಗೂ ಬಂಟ್ವಾಳ ವಾಮದಪದವು ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಕ್ಸ್ ರೇ ಯಂತ್ರಗಳು, ಪೊಲೀಸ್ ಕ್ವಾರ್ಟರ್ಸ್ ಕೌನ್ಸೆಲಿಂಗ್ ಹಾಲ್ ದುರಸ್ತಿ, ಭಾರತಿ ಗೋಶಾಲೆ ಸೇರಿದಂತೆ ವಿವಿಧ ಇಲಾಖೆ, ಸಂಸ್ಥೆಗಳಿಗೆ ಒಟ್ಟು 2 ಕೋಟಿ ರೂ.ಗಳ ಮೊತ್ತದ ಚೆಕ್ ಅನ್ನು ಕೆಐಒಸಿಎಲ್ ಸಂಸ್ಥೆ ನೀಡಿದೆ.
PublicNext
06/10/2022 08:19 pm