ಮಂಗಳೂರು: ರಾಜಕೀಯ ದುರುದ್ದೇಶಪೂರಿತ ಕೊಲೆಗಳಿಂದ ಅವರ ಹೆತ್ತವರಿಗೆ ದೊರಕಿದ್ದು ಕೇವಲ ಶವ ಮಾತ್ರ. ಯುವಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಕುಟುಂಬಕ್ಕೆ ಗರಿಷ್ಠ ಪರಿಹಾರ ದೊರಕಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಕೋಮು ಗಲಭೆಗೆ ಅದೆಷ್ಟೋ ಯುವಕರು ಬಲಿಯಾಗಿದ್ದಾರೆ. ಚುನಾವಣೆ, ರಾಜಕೀಯ ಲಾಭಗೋಸ್ಕರ ಯುವಕರ ಬಲಿಯನ್ನೇ ಮುಂದಿಟ್ಟುಕೊಂಡು ಅದೆಷ್ಟೋ ಮುಖಂಡರು ಶಾಸಕರು, ಮಂತ್ರಿಗಳಾಗಿದ್ದಾರೆ.
ಆದರೆ, ಆ ಬಳಿಕ ಅವರು ಕೊಲೆಯಾದ ಯುವಕರ ಮನೆಗೆ ಭೇಟಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ ಮಿಥುನ್ ರೈ, ಚುನಾವಣೆ ಬಳಿಕ ಇವರ ಕಪಟ ಹಿಂದುತ್ವ ಎಲ್ಲಿಗೆ ಹೋಗುತ್ತದೆ? ರಾಜಕೀಯ ನಾಯಕರುಗಳು ಬಲಿಯಾದ ಯುವಕರ ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಯುವಜನರು ರಾಜಕಾರಣಿಗಳ ಪ್ರಚೋದನೆಯ ಮಾತಿಗೆ ಬಲಿಯಾಗದಿರಿ. ಯಾರದೋ ಮಾತಿಗೆ ಮರುಳಾಗಿ ದ್ವೇಷ ಹುಟ್ಟಿಸದೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಿ. ಹೆತ್ತವರ ಕಣ್ಣಲ್ಲಿ ಕಣ್ಣೀರು ತರಿಸುವಂತಹ ಕೆಲಸ ಮಾಡದಿರಿ. ಯುವಕರನ್ನು ಬಳಸಿಕೊಂಡು ರಾಜಕೀಯ ಮಾಡುವ ರಾಜಕಾರಣಿಗಳಿಗೆ ಯುವಕರು ಸರಿಯಾದ ಉತ್ತರ ನೀಡಲಿ. ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನಿನಡಿ ಶಿಕ್ಷೆ ನೀಡುವ ಕಾರ್ಯ ಶೀಘ್ರವೇ ಆಗಲಿ ಎಂದು ಹೇಳಿದರು.
PublicNext
27/07/2022 10:10 pm