ಕಾರ್ಕಳ : ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಕಾರ್ಕಳ ಶಾಸಕ ಸುನಿಲ್ ಕುಮಾರ್ ತಾಳಕ್ಕೆ ತಕ್ಕಂತೆ ಕುಣಿಯುತ್ತ ಜನತೆಗೆ ತೊಂದರೆ ನೀಡುತ್ತಿದ್ದಾರೆ. ಒಂದು ಪಕ್ಷದ ವಕ್ತಾರನಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪಕ್ಷದ ಸೇವೆ ಮಾಡಬೇಕಿದ್ದರೆ ಅಧಿಕೃತವಾಗಿ ಅದೇ ಪಕ್ಷಕ್ಕೆ ಸೇರಿಕೊಳ್ಳಲಿ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಗಂಭೀರ ಆರೋಪ ಮಾಡಿದರು.
ಅವರು ಹೆಬ್ರಿಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಗ್ರಾಪಂ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಶನಿವಾರ ಕಾರ್ಕಳ ತಾಲೂಕಿನ ಕಡ್ತಲ ಪಂ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಪಂ ಚುನಾವಣೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಕರೆದುಕೊಂಡು ಹೋಗಿ ವೀಕ್ಷಣೆ ಮಾಡಿದ್ದಾರೆ. ಮಾಸ್ಕ್ ಕೂಡ ಹಾಕಿಲ್ಲ. ಇದು ಸರಿಯೇ? ನೀತಿಸಂಹಿತೆ ಪಾಲಿಸುವ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿಯೇ ಈ ರೀತಿ ಮಾಡಿದರೆ ಹೇಗೆ? ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.
ಎಣ್ಣೆಹೊಳೆಯ 108 ಕೋಟಿ ರೂ.ನ ಡ್ಯಾಮ್ ಕಾಮಗಾರಿಯಿಂದಾಗಿ ಸ್ಥಳೀಯರಿಗೆ ಭಾರಿ ತೊಂದರೆ ಯಾಗುತ್ತಿದೆ ಎಂದು ಡಿ.ಸಿ.ಗೆ ಮನವಿ ಮಾಡಿದರೂ ಅವರು ಎಣ್ಣೆಹೊಳೆಗೆ ಭೇಟಿ ನೀಡಿಲ್ಲ. ಜಿಲ್ಲೆಯಲ್ಲಿ ಎಸ್ ಪಿ ಸಹಿತ ಪೊಲೀಸ್ ಇಲಾಖೆ ಮಾತ್ರ ನ್ಯಾಯ, ಜನಪರವಾದ ಕೆಲಸ ಮಾಡುತ್ತಿದೆ ಎಂದರು.
ಹೆಬ್ರಿ ತಾಲೂಕಿನ ಬಹುತೇಕ ಗ್ರಾಪಂನಲ್ಲಿ ಕಾಂಗ್ರೆಸ್ ಆಡಳಿತ ಬರಲಿದೆ. ಬಿಜೆಪಿಯಿಂದಾಗಿ ಜನರ ಬದುಕೇ ಕಷ್ಟವಾಗಿದೆ. ಜನತೆಗೂ ತಡವಾಗಿ ಜ್ಞಾನೋದಯವಾಗುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಡಾ. ವೀರಪ್ಪ ಮೊಯ್ಲಿ ಮತ್ತು ದಿ.ಗೋಪಾಲ ಭಂಡಾರಿ ಯವರು ಹೆಬ್ರಿ ತಾಲೂಕು ಮಾಡುವ ಮೂಲಕ ಶಾಶ್ವತ ಕೊಡುಗೆ ನೀಡಿದ್ದಾರೆ. ಮತ ಕೇಳಲು ನಮಗೆ ಇದೊಂದೇ ಸಾಧನೆ ಸಾಕು ಎಂದು ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಬಿಜೆಪಿಯವರು ಮತ್ತು ಸರ್ಕಾರವನ್ನು ಪ್ರಶ್ನಿಸಿದರೆ ಶಾಸಕರು, ಅಧಿಕಾರಿಗಳ ಮೂಲಕ ಅವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದವರು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರಾದ ಗುಳ್ಕಾಡು ಭಾಸ್ಕರ ಶೆಟ್ಟಿ, ಶಂಕರ ಶೇರಿಗಾರ್, ಶಶಿಕಲಾ ದಿನೇಶ್ ಪೂಜಾರಿ, ದಿನೇಶ ಶೆಟ್ಟಿ ಮುಂತಾದವರು ಹಾಜರಿದ್ದರು.
Kshetra Samachara
14/12/2020 06:08 pm